×
Ad

ಬೀದರ್ | ಕರ್ತವ್ಯ ನಿರ್ಲಕ್ಷ್ಯ ಆರೋಪ : ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವಿಠಲ್ ಸೇಡಂಕರ್ ಅಮಾನತು

Update: 2025-10-29 17:28 IST

ಬೀದರ್ : ಮೇಲಾಧಿಕಾರಿಗಳ ಆದೇಶ ಉಲ್ಲಂಘನೆ ಮತ್ತು ಕರ್ತವ್ಯದಲ್ಲಿ ನಿರ್ಲಕ್ಷ್ಯತನ ಹಾಗೂ ಬೇಜವಾಬ್ದಾರಿತನ ತೋರಿದ್ದಾರೆ ಎಂದು ಆರೋಪಿಸಿ ಹುಮನಾಬಾದ್ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವಿಠಲ್ ಸೇಡಂಕರ್ ಅವರನ್ನು ಅಮಾನತುಗೊಳಿಸಲಾಗಿದೆ.

ಹುಮನಾಬಾದ್ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವಿಠಲ್ ಸೇಡಂಕರ್ ಅವರು ಕಚೇರಿ ಕರ್ತವ್ಯದಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸುತ್ತಿಲ್ಲ. ಕೇಂದ್ರ ಸ್ಥಾನಕ್ಕೆ ನಿಗದಿತ ಅವಧಿಯಲ್ಲಿ ಹಾಜರಾಗುತಿಲ್ಲ. ವಸತಿ ನಿಲಯಗಳ ಪ್ರವಾಸದ ಅವಧಿಯಲ್ಲಿ ಬಯೊಮೆಟ್ರಿಕ ಹಾಜರಾತಿ ವ್ಯವಸ್ಥೆ ಇದ್ದರೂ ಹಾಜರಾತಿ ಹಾಕಲಿಲ್ಲ. ಕಚೇರಿಯ ಪ್ರತಿಯೊಂದು ಯೋಜನೆಯ ಅನುಷ್ಠಾನಕ್ಕೆ, ವಸತಿ ನಿಲಯಗಳ ನಿರ್ವಹಣೆಯ ಬಿಲ್ಲುಗಳಿಗೆ, ಸಿಂಧುತ್ವಕ್ಕೆ ಹಣ ಇಲ್ಲದೆ ಇವರು ಯಾವುದೇ ಕೆಲಸ ಮಾಡುವುದಿಲ್ಲ. ಇವರ ವಿರುದ್ಧ ಹಣಕಾಸಿನ ವ್ಯವಹಾರದ ಬಗ್ಗೆ ಸುಧೀರ್ಘವಾಗಿ ತಪಾಸಣೆ ಮಾಡಿ ಈ ಅಧಿಕಾರಿಯನ್ನು ಅಮಾನತು ಮಾಡಬೇಕು ಎಂದು ದ್ರಾವಿಡ ಕ್ರಾಂತಿ ಯುವ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಗೌತಮ್ ಪ್ರಸಾದ್ ಅವರು ದೂರು ಸಲ್ಲಿಸಿದ್ದರು.

ಗೌತಮ್ ಪ್ರಸಾದ್ ಅವರ ದೂರಿನ ಮೆರೆಗೆ ಹುಮನಾಬಾದ್ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳನ್ನು ಜಂಟಿಯಾಗಿ ಪರಿಶೀಲಿಸಿ ವರದಿ ನೀಡಲು ಸೂಚಿಸಲಾಗಿತ್ತು. ಸೂಕ್ತ ತನಿಖೆ ನಡೆಸಿದ ಅಧಿಕಾರಿಗಳು ವಿಠಲ್ ಸೇಡಂಕರ್ ಅವರು ಕೇವಲ 2023ನೇ ವರ್ಷದ ಜೂನ್ ಮತ್ತು ಜುಲೈ ತಿಂಗಳ ಹಾಜರಾತಿ ಮತ್ತು ಸಂದರ್ಶಕ ವಹಿ ಮಾತ್ರ ಸಲ್ಲಿಸಿರುತ್ತಾರೆ. ಹಾಗಾಗಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬಹುದು ಎಂದು ವರದಿ ಸಲ್ಲಿಸಿದ್ದರು.

ಅವರ ವರದಿಯನ್ನು ಅಧರಿಸಿ, ಪ್ರಸ್ತಾನೆಯಲ್ಲಿ ವಿವರಿಸಿದ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನಿ) ನಿಯಮಾವಳಿಗಳು 1957 ರ ನಿಯಮ 10 (1) (ಡಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಹುಮನಾಬಾದ್ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವಿಠಲ್ ಸೇಡಂಕರ್ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದೇಶ ಹೊರಡಿಸಿದ್ದಾರೆ.

ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಡತಕ್ಕದಲ್ಲ. ಹಾಗೆಯೇ ಕೆ ಸಿ ಎಸ್ ಆರ್ ನಿಯಮ 98ರ ಅನ್ವಯ ಜೀವನಾದಾರ ಭತ್ಯೆ ಪಡೆಯಲು ಅರ್ಹರಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News