Bidar | ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಆರೋಪ : ಕ್ರಮ ಕೈಗೊಳ್ಳಲು ಆಗ್ರಹ

ನ್ಯಾಯಬೆಲೆ ಅಂಗಡಿಗಳ ಲಗತ್ತು ಪ್ರಕ್ರಿಯೆ, ಅಕ್ಕಿ ಕಾಳಸಂತೆ, ಆಹಾರ ನಿರೀಕ್ಷಕರ ವಿರುದ್ಧ ಗಂಭೀರ ಆರೋಪ

Update: 2026-07-27 16:42 IST

ಬೀದರ್: ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಹಾಗೂ ಸರ್ಕಾರದ ನಿಯಮಗಳ ಉಲ್ಲಂಘನೆ ನಡೆಯುತ್ತಿದೆ ಎಂದು ಆರೋಪಿಸಿರುವ ಯುವ ಕ್ರಾಂತಿ ಸಂಘಟನೆ, ಈ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

ಸೋಮವಾರ ತಹಶೀಲ್ದಾರ್ ಅವರ ಮೂಲಕ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ, ಕೊಂಗಳಿ, ವಾಂಜರಖೇಡ, ಹಲಸಿತೂಗಾಂವ್ ಹಾಗೂ ಭಾಟಸಾಂಗವಿ ಗ್ರಾಮಗಳ ನ್ಯಾಯಬೆಲೆ ಅಂಗಡಿಗಳ ಲಗತ್ತು ಪ್ರಕ್ರಿಯೆಯಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸದೆ ಅಧಿಕಾರಿಗಳು ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಒಂದು ನ್ಯಾಯಬೆಲೆ ಅಂಗಡಿಗೆ ಲಗತ್ತುಗೊಂಡ ಗ್ರಾಮಗಳಲ್ಲಿ ಆಹಾರ ನಿರೀಕ್ಷಕರು ಖಾಸಗಿ ವ್ಯಕ್ತಿಗಳ ಮೂಲಕ ಪಡಿತರ ವಿತರಣೆ ಮಾಡಿಸುತ್ತಿದ್ದು, ಇದು ಕಾನೂನುಬಾಹಿರವಾಗಿದ್ದು ಭ್ರಷ್ಟಾಚಾರಕ್ಕೆ ಅವಕಾಶ ಕಲ್ಪಿಸಿದೆ ಎಂದು ಸಂಘಟನೆ ದೂರಿದೆ.

ತಾಲ್ಲೂಕಿನ ಹಲವು ನ್ಯಾಯಬೆಲೆ ಅಂಗಡಿಗಳ ಮಾಲೀಕರಿಂದ ಪ್ರತಿ ಕ್ವಿಂಟಲ್‌ಗೆ ಶೇ.10ರಿಂದ 15ರಷ್ಟು ಅಕ್ರಮ ಹಣವನ್ನು ಆಹಾರ ನಿರೀಕ್ಷಕರು ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಇದರ ಪರಿಣಾಮವಾಗಿ ಕೆಲವು ಅಂಗಡಿಗಳಲ್ಲಿ ಪಡಿತರ ಚೀಟಿದಾರರಿಗೆ ಒಂದು ಕೆಜಿ ಅಕ್ಕಿ ಕಡಿಮೆ ನೀಡಿ ವಿತರಿಸಲಾಗುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಅಕ್ರಮ ಹಣ ನೀಡದ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಉದ್ದೇಶಪೂರ್ವಕವಾಗಿ ತನಿಖೆ ನಡೆಸಿ, ಸುಳ್ಳು ವರದಿ ಸಿದ್ಧಪಡಿಸಿ ಅಮಾನತು ಮಾಡುವಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಂಘಟನೆ ಆರೋಪಿಸಿದೆ. ಸರ್ಕಾರದ ಉಚಿತ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳಿದ್ದರೂ, ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಳವಳ ವ್ಯಕ್ತಪಡಿಸಿದೆ.

ಭಾಲ್ಕಿ ತಾಲ್ಲೂಕಿನ ಎಲ್ಲಾ ಲಗತ್ತು ನ್ಯಾಯಬೆಲೆ ಅಂಗಡಿಗಳ ಪ್ರಕ್ರಿಯೆ ಕುರಿತು ಜಿಲ್ಲಾ ಅಥವಾ ರಾಜ್ಯ ಮಟ್ಟದ ಸ್ವತಂತ್ರ ತನಿಖಾ ತಂಡದಿಂದ ಪರಿಶೀಲನೆ ನಡೆಸಬೇಕು. ಖಾಸಗಿ ವ್ಯಕ್ತಿಗಳ ಮೂಲಕ ಪಡಿತರ ವಿತರಣೆ, ಅಕ್ರಮ ಹಣ ವಸೂಲಿ, ಕಡಿಮೆ ಪ್ರಮಾಣದಲ್ಲಿ ಆಹಾರ ಧಾನ್ಯ ವಿತರಣೆ ಹಾಗೂ ಅಕ್ಕಿ ಕಾಳಸಂತೆ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಯುವ ಕ್ರಾಂತಿ ಸಂಘಟನೆ ಆಗ್ರಹಿಸಿದೆ.

ಇದೇ ವೇಳೆ ತನಿಖಾ ವರದಿಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಿ, ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

ಈ ಸಂದರ್ಭದಲ್ಲಿ ಯುವ ಕ್ರಾಂತಿ ಸಂಘಟನೆಯ ಜಿಲ್ಲಾಧ್ಯಕ್ಷ ಸಂಗಮೇಶ್ ಭೂರೆ, ಭಾಲ್ಕಿ ತಾಲುಕಾಧ್ಯಕ್ಷ ಬಲವಂತ್ ಪರಸಣ್ಣೆ, ಶರದ್ ದುರ್ಗಳೆ, ಬಿಬಿಶನ್ ಬಿರಾದಾರ್, ಶಿವಾಜಿ ಮೇತ್ರೆ, ಸುಭಾಷ್ ಮಾಶೆಟ್ಟೆ, ಪ್ರಶಾಂತ್ ಗಾಯಕವಾಡ್, ಸಂದೀಪ್ ಪರಸಣ್ಣೆ‌, ಅಭಿಷೇಕ್ ಕುಂಬಾರ್, ಮಹೇಶ್ ಪಾಟೀಲ್, ರಾಜಕುಮಾರ್ ಹುಪಳಾ‌ ಹಾಗೂ ಗಣಪತಿ ಮಾಟೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News