Bidar | ಮದ್ಯದ ಅಮಲಿನಲ್ಲಿ ಬ್ರಿಮ್ಸ್ ಎಮರ್ಜೆನ್ಸಿ ವಾರ್ಡ್‌ಗೆ ಬೈಕ್ ನುಗ್ಗಿಸಿದ ಯುವಕರು : ಪೊಲೀಸರಿಂದ ಲಾಠಿ ಏಟು
ಬೀದರ್: ನಗರದ ಜಿಲ್ಲಾ ಸರ್ಕಾರಿ ಬೋಧಕ ಆಸ್ಪತ್ರೆ (ಬ್ರಿಮ್ಸ್)ಯ ತುರ್ತು ಚಿಕಿತ್ಸಾ ಘಟಕಕ್ಕೆ ಬೈಕ್ ನುಗ್ಗಿಸಿ ಅತಿರೇಕದ ವರ್ತನೆ ನಡೆಸಿದ ಇಬ್ಬರು ಯುವಕರಿಗೆ ಪೊಲೀಸರು ಲಾಠಿ ಏಟು ನೀಡಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಮದ್ಯದ ಅಮಲಿನಲ್ಲಿದ್ದ ಇಬ್ಬರು ಯುವಕರು ತಲೆನೋವು ಇದೆ ಎಂದು ನೆಪ ಹೇಳಿಕೊಂಡು ಆಸ್ಪತ್ರೆಗೆ ಬಂದು, ಬಳಿಕ ಬೈಕ್ ಸಮೇತ ನೇರವಾಗಿ ತುರ್ತು ಚಿಕಿತ್ಸಾ ಘಟಕದೊಳಗೆ ನುಗ್ಗಿದ್ದಾರೆ. ಅವರ ಈ ಕೃತ್ಯದಿಂದ ಆಸ್ಪತ್ರೆಯಲ್ಲಿದ್ದ ರೋಗಿಗಳು, ವೈದ್ಯರು ಹಾಗೂ ಸಿಬ್ಬಂದಿಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರು ಯುವಕರನ್ನು ವಶಕ್ಕೆ ಪಡೆದು ಲಾಠಿ ಏಟು ನೀಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ತುರ್ತು ಚಿಕಿತ್ಸಾ ಘಟಕದಲ್ಲೇ ಈ ರೀತಿಯ ಅಸಭ್ಯ ವರ್ತನೆ ನಡೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಆಸ್ಪತ್ರೆ ಆವರಣದಲ್ಲಿ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.