ರಾಜ್ಯದ ಪಂಚಾಯತ್ ಚುನಾವಣೆಯಲ್ಲಿ ಶಿವಸೇನೆ ಸ್ಪರ್ಧೆ : ಆಂದೋಲಾ ಶ್ರೀ
ಸುಧಾಕಾರ್ ಬಿರಾದಾರ್ ಶಿವಸೇನೆಯ ಜಿಲ್ಲಾಧ್ಯಕ್ಷರಾಗಿ ಆಯ್ಕೆ
ಬೀದರ್ : ರಾಜ್ಯದಲ್ಲಿ ನಡೆಯುವ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಶಿವಸೇನೆಯ ಅಭ್ಯರ್ಥಿಗಳು ಸ್ಪರ್ಧೆ ನಡೆಸಲಿದ್ದಾರೆ ಎಂದು ಶಿವಸೇನಾ ರಾಜ್ಯಾಧ್ಯಕ್ಷ ಆಂದೋಲಾ ಶ್ರೀ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ರವಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 2025ರಲ್ಲಿ ರಾಜ್ಯದ 24 ಜಿಲ್ಲೆಗಳಲ್ಲಿ ಏಕನಾಥ್ ಶಿಂಧೆ ಬಣದ ಶಿವಸೇನಾ ಘಟಕ ಪ್ರಾರಂಭ ಮಾಡಲಾಗಿದೆ. ಶಿವಸೇನೆಯ ಬೀದರ್ ಜಿಲ್ಲೆಯ ಅಧ್ಯಕ್ಷರಾಗಿ ಸುಧಾಕಾರ್ ಬಿರಾದಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಶಿವಸೇನೆಯು ದೇಶದ 25 ರಿಂದ 26 ರಾಜ್ಯಗಳಲ್ಲಿ ಕಾರ್ಯ ಪ್ರಾರಂಭ ಮಾಡಿದೆ. ಇದರ ಮುಖ್ಯ ಉದ್ದೇಶವೇ ಭ್ರಷ್ಟಾಚಾರವನ್ನು ಅಳಿಸಿ ಅಭಿವೃದ್ಧಿ ಹಾಗೂ ಹಿಂದುತ್ವ ಬೆಳೆಸುವುದಾಗಿದೆ ಎಂದರು.
ರಾಜ್ಯದಲ್ಲಿ ಮಳೆಯಾಗದೆ ರೈತರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ರಾಜ್ಯ ಸರಕಾರ ಕೂಡಲೇ ಕರ್ನಾಟಕ ರಾಜ್ಯವನ್ನು ಬರಪೀಡಿತ ರಾಜ್ಯವೆಂದು ಘೋಷಣೆ ಮಾಡಬೇಕು. ಹಾಗೆಯೇ ಪ್ರತಿ ಏಕರೆ ಭೂಮಿಗೆ ಸುಮಾರು 25 ಸಾವಿರ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದ ಅವರು, ಕಳೆದ ವರ್ಷ ವಿಮೆ ಮಾಡಿದ ರೈತರಿಗೆ ಪೂರ್ಣ ಪ್ರಮಾಣದ ಹಣ ವರ್ಗಾವಣೆ ಮಾಡಲಿಲ್ಲ. ತಕ್ಷಣವೇ ವಿಮೆ ಹಣ ಬಿಡುಗಡೆ ಮಾಡಬೇಕು. ಹಾಗೆಯೇ ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶಿವಸೇನಾದ ನೂತನ ಜಿಲ್ಲಾಧ್ಯಕ್ಷರಾದ ಸುಧಾಕರ್ ಬಿರಾದಾರ್, ಅಮೃತ್ ಪಾಟೀಲ್, ಗೋರಕನಾಥ್ ಮಡಿವಾಳ್, ನಾಗನಾಥ್ ವಾಡೆಕರ್, ಸಿಂಧುತಾಯಿ ಮಾನೆ, ನಂದಾತಾಯಿ ಹಾಗೂ ರಾಕೇಶ್ ಜಮಾದಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.