ಬೀದರ್| ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಸ್ಥಳಾಂತರ ರದ್ದುಗೊಳಿಸುವಂತೆ ಮನವಿ
ಬೀದರ್ : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಗರದ ಮೈಲೂರನಲ್ಲಿ ನಡೆಯುತ್ತಿರುವ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಗೋಡಂಪಳ್ಳಿ ಗ್ರಾಮಕ್ಕೆ ಸ್ಥಳಾಂತರ ಮಾಡುತ್ತಿರುವುದನ್ನು ರದ್ದುಗೊಳಿಸಬೇಕು ಎಂದು ಕರ್ನಾಟಕ ಮಾನವ ಹಕ್ಕುಗಳು ಮತು ಭ್ರಷ್ಟಾಚಾರ ನಿಗ್ರಹ ಸಮಿತಿಯಿಂದ ಮನವಿ ಸಲ್ಲಿಸಲಾಗಿದೆ.
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳಿಗೆ ಸೋಮವಾರ ಸಲ್ಲಿಸಿದ ಮನವಿಯಲ್ಲಿ, ಸರಕಾರದ ಆದೇಶದ ಮೇರೆಗೆ ಬೀದರ್ ನಗರದ ಮೈಲೂರಿನಲ್ಲಿ ಮಂಜೂರಾದ ವಸತಿ ನಿಲಯ, ಗ್ರಾಮೀಣ ಭಾಗದ ಅರಣ್ಯ ಪ್ರದೇಶದಲ್ಲಿರುವ ಗೋಡಂಪಳ್ಳಿ ಗ್ರಾಮಕ್ಕೆ ಉದ್ದೇಶಪೂರ್ವಕವಾಗಿ ಸ್ಥಳಾಂತರ ಮಾಡುತ್ತಿರುವುದನ್ನು ರದ್ದುಗೋಳಿಸಬೇಕು ಎಂದು ಆಗ್ರಹಿಸಲಾಗಿದೆ.
ವಸತಿ ನಿಲಯ ಸ್ಥಳಾಂತರಗೊಳಿಸುತ್ತಿರುವ ಜಾಗವು ಅರಣ್ಯ ಪ್ರದೇಶದಲ್ಲಿ ಇರುವುದರಿಂದ ವಿದ್ಯಾರ್ಥಿನಿಯರು ಭಯದಲ್ಲಿಯೇ ಇರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ ಮೇಲಾಧಿಕಾರಿಗಳು ವಿದ್ಯಾರ್ಥಿನಿಯರ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರದೆ, ಸುರಕ್ಷತೆ ಬಗ್ಗೆ ಕ್ರಮಕೈಗೊಂಡು ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಸ್ಥಳಾಂತರ ಮಾಡುವುದನ್ನು ರದ್ದುಗೊಳಿಸಬೇಕು. ಇಲ್ಲವಾದರೆ ಕಾನೂನಿನ ಪ್ರಕಾರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿಗ್ರಹ ಸಮಿತಿಯ ಕಲ್ಬುರ್ಗಿ ವಿಭಾಗೀಯ ಅಧ್ಯಕ್ಷ ಸಂಗಮೇಶ್ ಭಾವಿದೊಡ್ಡಿ, ಧನರಾಜ್ ಮುಸ್ತಾಪುರ್, ಬೀರಗೊಂಡ್ ಗೋಡಂಪಳೆ ಹಾಗೂ ವೀರಶೆಟ್ಟಿ ಕೌಡಗೆ ಇದ್ದರು.