×
Ad

ಬೀದರ್ | ರೇಷ್ಮೆ ಇಲಾಖೆಯ ಸ್ಥಳದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಅರವಿಂದಕುಮಾರ್ ಅರಳಿ ವಿರೋಧ : ಸಿಎಂಗೆ ಪತ್ರ

Update: 2025-11-04 09:54 IST

ಬೀದರ್ : ರೇಷ್ಮೆ ಇಲಾಖೆಯ ಸ್ಥಳದಲ್ಲಿ ಅಂತರರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣಕ್ಕೆ ಸಚಿವ ಈಶ್ವರ್ ಖಂಡ್ರೆ ಅವರು ಮುಂದಾಗಿದ್ದು, ರೇಷ್ಮೆ ಇಲಾಖೆಯ ಜಮೀನಿನಲ್ಲಿಯೇ ಕ್ರೀಡಾಂಗಣ ಮಾಡುವುದು ಸಮಂಜಸವಲ್ಲ. ರೇಷ್ಮೆ ಇಲಾಖೆಯನ್ನು ಅಭಿವೃದ್ಧಿ ಮಾಡುವುದು ಬಿಟ್ಟು, ಅದನ್ನು ಮೊಟಕು ಗೊಳಿಸಲು ಹೊರಟಿದ್ದು ಸರಿಯಾದ ಕ್ರಮವಲ್ಲ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ್ ಅರಳಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಬೀದರ್ ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ಸಚಿವ ಈಶ್ವರ್ ಖಂಡ್ರೆ ಅವರ ವಿರುದ್ಧ ಕೆಲ ಕಾಂಗ್ರೆಸ್ ನಾಯಕರು ಅತೃಪ್ತರಾಗಿದ್ದು, ಅರವಿಂದಕುಮಾರ್ ಅರಳಿ ಅವರು ಆ ಅತೃಪ್ತರ ಪಟ್ಟಿಯ ಮುಂಚೂಣಿಯಲ್ಲಿದ್ದಾರೆ. ಇದೀಗ ರೇಷ್ಮೆ ಇಲಾಖೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಅವರು ವಿರೋಧ ವ್ಯಕ್ತಪಡಿಸಿದ್ದು, ಸ್ವ ಪಕ್ಷದಿಂದಲೇ ಅಂತರರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣಕ್ಕೆ ವಿರೋಧ ವ್ಯಕ್ತವಾಗಿದೆ. ಇದು ಕಾಂಗ್ರೆಸ್ ಪಕ್ಷದಲ್ಲಿ ಮತ್ತೆ ಚರ್ಚೆ ಹುಟ್ಟು ಹಾಕಿದೆ.

ಮುಖ್ಯಮಂತ್ರಿಗೆ ಸಲ್ಲಿಸಿದ ಪತ್ರದಲ್ಲಿ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ನ.1 ರಂದು ನಗರದ ನೆಹರು ಕ್ರೀಡಾಂಗಣದಲ್ಲಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಕ್ರೀಡಾಂಗಣ ನಿರ್ಮಾಣದ ಒಂದು ಘೋಷಣೆ ಕೇಳಿ ಜನ ಬಹಳ ಸಂತೋಷ ಪಟ್ಟರು. ಆದರೆ ರೇಷ್ಮೆ ಇಲಾಖೆಯ ಜಮೀನಿನಲ್ಲಿಯೇ ಕ್ರೀಡಾಂಗಣ ನಿರ್ಮಿಸುವುದು ಸಮಂಜಸವಲ್ಲ. ರೇಷ್ಮೆ ಇಲಾಖೆ ಇಲ್ಲಿ ಕೆಲಸ ಮಾಡುತ್ತಿರುವುದರಿಂದ ಶೇ.5 ರಿಂದ 10 ಪ್ರತಿಶತ ರೇಷ್ಮೆ ಅಭಿವೃದ್ಧಿಯಾಗಿದೆ. ಹಾಗಾಗಿ ರೇಷ್ಮೆ ಇಲಾಖೆ ಸದೃಢ ಮಾಡುವುದು ಬಿಟ್ಟು ಅದನ್ನು ಮೊಟಕು ಮಾಡುವುದು ಯಾವ ಅಭಿವೃದ್ಧಿಯಾಗಿದೆ ಎಂದು ಪ್ರಶ್ನೆ ಮಾಡಿದ್ದಾರೆ.

ಆ ಸ್ಥಳದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವುದರಿಂದ ರೇಷ್ಮೆ ವಾಣಿಜ್ಯ ಬೆಳೆಯತ್ತ ಮುಖ ಮಾಡಿದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಈ ಹಿಂದೆ ತಮ್ಮ ಮೊದಲನೆ ಅವಧಿಯಲ್ಲಿಯೆ ತಾವು ತೋಟಗಾರಿಕೆ ಮಹಾ ವಿದ್ಯಾಲಯಕ್ಕೆ ಸೂಮಾರು 3.5 ಕೋಟಿ ರೂ. ಭರಿಸಿ ಭೂಮಿ ಪಡೆಯುವಂತೆ ಆದೇಶ ನೀಡಿದ್ದಿರಿ. ಆದರೆ ತೋಟಗಾರಿಕೆ ವಿಶ್ವ ವಿದ್ಯಾಲಯದಲ್ಲಿ ಅಷ್ಟು ಹಣ ಭರಿಸಲು ಆಗಲಿಲ್ಲ. ಅದಕ್ಕೆ ಅದು ಹಾಗೆ ನೆನೆಗುದಿಗೆ ಬಿದ್ದಿತ್ತು. ನಂತರ ನವದೆಹಲಿಯ ಐಸಿಎಆ‌ರ್ ನವರು ಜಮೀನು ವ್ಯವಸ್ಥೆ ಮಾಡದಿದ್ದಲಿ ಮಹಾವಿದ್ಯಾಲಯ ರದ್ದು ಮಾಡುತ್ತೇವೆ ಎಂದು ಹೇಳಿದ ವಿಷಯ ನನ್ನ ಗಮನಕ್ಕೆ ತಂದಾಗ ನಾನು ಮುತುವರ್ಜಿವಹಿಸಿ ಬೀದರ್ ರೇಷ್ಮೆ ಇಲಾಖೆಯ ಒಟ್ಟು 82.1 ಎಕರೆ ಭೂಮಿಯಲ್ಲಿ 49 ಎಕರೆ ಜಮೀನು ಸರ್ಕಾರದಿಂದ ಉಚಿತವಾಗಿ ಕೊಡಿಸಿದ್ದೇನೆ. ಹಾಗೆಯೇ ರೇಷ್ಮೆ ಇಲಾಖೆ ಅಭಿವೃದ್ಧಿ ಪಡಿಸಲು ಸರ್ಕಾರದ ಮೇಲೆ ಒತ್ತಡ ಹೇರಿ ರೈತರ ಜೀವ ನಾಡಿಯಾಗಿ ಮಾಡುವಂತೆ ಸೂಚಿಸಿದ್ದೆ. ಆದರೆ ಇವಾಗ ರೇಷ್ಮೆ ಇಲಾಖೆಯನ್ನು ಅಭಿವೃದ್ಧಿ ಪಡಿಸುವುದು ಬಿಟ್ಟು ಅದನ್ನು ನಿರ್ನಾಮ ಮಾಡಲು ಹೊರಟಿದ್ದು ಬಹಳ ನೋವಿನ ಸಂಗತಿಯಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಅಂತಾರಾಷ್ಟ್ರೀಯ ಕ್ರೀಡಾಂಗಣ ಮಾಡುವುದಾದರೆ ಕೆಲವು ವರ್ಷಗಳ ಹಿಂದೆ ಅಂತರರಾಷ್ಟ್ರೀಯ ಕ್ರೀಡಾಂಗಣ ಮಾಡಲು ಬೆಂಗಳೂರಿನ ಕೆಸಿಎ ಅವರ ಸಹಯೋಗದೊಂದಿಗೆ ಒಂದು ಕ್ರಿಯಾ ಯೋಜನೆ ತಯಾರಿಸಿ ಜಿಲ್ಲಾಧಿಕಾರಿಗಳ ಮೂಲಕ ಒಂದು ಪ್ರಸ್ತಾವನೆಯನ್ನು ಕಲಬುರಗಿಯ ವಿಭಾಗಾಧಿಕಾರಿಗಳಿಗೆ ಕಳುಹಿಸಲಾಗಿತ್ತು. ಆದರೆ ಕೆಲವರ ಹಸ್ತಕ್ಷೇಪದ ಮೇರೆಗೆ ಅದು ನೆನೆಗುದಿಗೆ ಬಿದಿತ್ತು. ಆ ಕಡತವನ್ನೆ ಒಂದು ಸಲ ತರಸಿ, ಮರು ಪರಿಶೀಲನೆ ನಡೆಸಿ ಭಾಲ್ಕಿಯ ರಾಷ್ಟ್ರೀಯ ಹೆದ್ದಾರಿ ಹತ್ತಿರ ಇರುವ ಕಪಲಾಪುರ ಗ್ರಾಮದ ಸರ್ವೆ ನಂಬರನಲ್ಲಿಯೇ ಪ್ರಾರಂಭಿಸಿದರೆ ಉತ್ತಮವಾಗುತ್ತದೆ. ಇಲ್ಲಿ ಕ್ರಿಡಾಂಗಣ ಸಂಪೂರ್ಣವಾಗಿ ನಿರ್ಮಾಣದ ಹಣವು ಖರ್ಚು ಮಾಡುವ ಜವಾಬ್ದಾರಿ ಕರ್ನಾಟಕ ಕ್ರಿಕೆಟ್ ಅಸೋಷಿಶಿಯನ್ (ಕೆಸಿಎ) ನವರು ತೆಗೆದುಕೊಳ್ಳಲು ಮುಂದೆ ಬಂದಿದ್ದರು. ಅದನ್ನೆ ಮುಂದುವರೆಸಿ ಬೆಂಗಳೂರಿನ ಕೆಸಿಎ ಅವರ ಜೊತೆ ಮಾತನಾಡಿ ಬಗೆ ಹರಿಸಬಹುದು ಎಂದು ಸಲಹೆ ನೀಡಿದ್ದಾರೆ.

ಅಂತರರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣ ಮಾಡಲು ಹೊರಟ ಸ್ಥಳದ ಬಗ್ಗೆ ಪುನರ್ ಪರಿಶೀಲಿಸಿ ಈ ರೇಷ್ಮೆ ಇಲಾಖೆಯ ಸ್ಥಳ ರಕ್ಷಿಸಿ ರೈತರಿಗೆ ಸಹಕಾರವಾಗುವಂತೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರಿಗೆ ಸೂಚಿಸಬೇಕು. ಇವಾಗ 25 ಕೋಟಿ ರೂ. ಖರ್ಚು ಮಾಡಲು ಹೋರಟ ಜಿಲ್ಲಾಡಳಿತ ಆ ಹಣವನ್ನು ಉಳಿಸಿ ಬೇರೆ ಅಭಿವೃದ್ಧಿ ಕೆಲಸ ಮಾಡುವಂತೆ ತಿಳಿಸಬೇಕು ಎಂದು ಅವರು ವಿನಂತಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News