ಬೀದರ್ | ಅ.28ರಂದು ಕಮಲನಗರ ತಾಲ್ಲೂಕು ಪ್ರಜಾಸೌಧದ ಭೂಮಿ ಪೂಜೆ : ಶಾಸಕ ಪ್ರಭು ಚೌವ್ಹಾಣ್
ಬೀದರ್ : ಈ ತಾಲೂಕು ಪ್ರಜಾಸೌಧದ ಭೂಮಿ ಪೂಜೆಯನ್ನು ಅ.28 ರಂದು ಬೆಳಿಗ್ಗೆ 11 ಗಂಟೆಗೆ ಕಮಲನಗರ್ ತಾಲೂಕು ಪ್ರಜಾ ಸೌಧ ಆಡಳಿತ ಕೇಂದ್ರದ ಕಟ್ಟಡಕ್ಕೆ ಭೂಮಿ ಪೂಜೆ ಮಾಡಲಾಗುವುದು. ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಆಗಮಿಸುತ್ತಿದ್ದಾರೆ ಎಂದು ಶಾಸಕ ಪ್ರಭು ಚೌವ್ಹಾಣ್ ಅವರು ಹೇಳಿದರು.
ರವಿವಾರ ಕಮಲನಗರ್ ತಾಲೂಕಿನಲ್ಲಿ ಪ್ರಜಾ ಸೌಧ ತಾಲ್ಲೂಕು ಆಡಳಿತ ಕೇಂದ್ರದ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲನೆ ಮಾಡಿ ಅವರು ಮಾತನಾಡಿದರು.
ನನ್ನ ನಿರಂತರ ಪ್ರಯತ್ನದಿಂದ ಕಮಲನಗರ್ ತಾಲೂಕು ಪ್ರಜಾಸೌಧ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಕಮಲನಗರ ಹೊಸ ತಾಲ್ಲೂಕು ಕೇಂದ್ರವಾದ ನಂತರ ಎಲ್ಲ ಇಲಾಖೆಗಳು ಕಾರ್ಯಾರಂಭ ಮಾಡುವ ದಿಸೆಯಲ್ಲಿ ನಿರಂತರ ಶ್ರಮಿಸುತ್ತಿದ್ದೇನೆ. ತಾಲ್ಲೂಕು ಆಡಳಿತ ಜನರ ನಿಕಟ ಇಲಾಖೆಯಾಗಿರುವುದರಿಂದ ತಾಲ್ಲೂಕು ಆಡಳಿತ ಕೇಂದ್ರ ನಿರ್ಮಿಸುವುದು ಅತ್ಯಂತ ಅವಶ್ಯವಾಗಿತ್ತು. ಹಾಗಾಗಿ ಸರ್ಕಾರಕ್ಕೆ ನಿರಂತರವಾಗಿ ಮನವರಿಕೆ ಮಾಡುತ್ತಾ ಬಂದಿದ್ದೇನೆ. ಅನೇಕ ಸಲ ಮುಖ್ಯಮಂತ್ರಿ, ಕಂದಾಯ ಸಚಿವ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಖುದ್ದಾಗಿ ಭೇಟಿಯಾಗಿ ಬೇಡಿಕೆ ಸಲ್ಲಿಸಿದ್ದೇನೆ ಎಂದರು.
ಎರಡು ಅಂತಸ್ತಿನ ಬೃಹತ್ ಕಟ್ಟಡ ನಿರ್ಮಾಣಕ್ಕಾಗಿ 15 ಕೋಟಿ ರೂ. ಒದಗಿಸಬೇಕು ಎಂದು ಬೇಡಿಕೆ ಸಲ್ಲಿಸಿದ್ದೇನೆ. ಆದರೆ ಸರ್ಕಾರ 8.60 ಕೋಟಿ ರೂ. ಮಂಜೂರಾತಿ ನೀಡಿದೆ. ನಿವೇಶನದ ಸಮಸ್ಯೆಯಿತ್ತು. ರಾಜಕುಮಾರ್ ಪೊಲೀಸ್ ಪಾಟೀಲ್ ಅವರು 2.5 ಎಕರೆ ಜಮೀನು ದಾನವಾಗಿ ನೀಡಿದ್ದರಿಂದ ನಿವೇಶನ ಸಮಸ್ಯೆ ಕೊನೆಗೊಂಡು ಕಟ್ಟಡ ಕೆಲಸ ಸುಗಮವಾಗಿ ನಡೆಯಲು ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಬೇಡಿಕೆಗೆ ಅನುಗುಣ ಅನುದಾನ ತಂದು ಅಭಿವೃದ್ಧಿ ಕೆಲಸಗಳು ಕೈಗೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಕರ್ನಾಟಕ ಗೃಹ ಮಂಡಳಿಯಿಂದ ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತಿದೆ. ಉಪ ಗುತ್ತಿಗೆ ನೀಡುವುದಾಗಲಿ, ಅನ್ಯರಿಗೆ ಕೆಲಸ ವಹಿಸುವುದಾಗಲಿ ಮಾಡದೇ ಮೂಲ ಗುತ್ತಿಗೆದಾರರಿಂದ ಕೆಲಸ ಮಾಡಿಸಬೇಕು. ಅಂದಾಜು ಪಟ್ಟಿಯಲ್ಲಿ ಇರುವಂತೆ ಕಾಮಗಾರಿಯನ್ನು ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಕಾಮಗಾರಿ ಅನುಷ್ಠಾನದಲ್ಲಿ ಲೋಪವಾದರೆ ನಾನು ಸುಮ್ಮನೆ ಬಿಡುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಪ್ರಜಾಸೌಧಕ್ಕೆ ಹೋಗುವ ರಸ್ತೆ ಹಾಗೂ ಇನ್ನಿತರೆ ಅವಶ್ಯಕ ಕೆಲಸಗಳನ್ನು ಆದ್ಯತೆಗೆ ಅನುಗುಣವಾಗಿ ಮಾಡಿಸಬೇಕು. ಅವಶ್ಯಕತೆಯಿದ್ದಲ್ಲಿ ಅನುದಾನ ಒದಗಿಸುತ್ತೇನೆ. ಕಾಮಗಾರಿ ಗುಣಮಟ್ಟದಿಂದ ಮಾಡಬೇಕು. ಈ ದಿಶೆಯಲ್ಲಿ ತಹಶೀಲ್ದಾರರು ಕೂಡ ಮುತುವರ್ಜಿ ವಹಿಸಬೇಕು ಎಂದು ಸೂಚಿಸಿದರು.
ಈ ವೇಳೆ ತಹಶೀಲ್ದಾರರಾದ ಅಮಿತಕುಮಾರ್ ಕುಲಕರ್ಣಿ, ಕರ್ನಾಟಕ ಗೃಹ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಶಶಿಕಾಂತ್ ಅವರು ಪ್ರಜಾಸೌಧ ಕಾಮಗಾರಿಯ ಕುರಿತು ವಿವರಣೆ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹಣಮಂತರಾವ್ ಕೌಟಗೆ, ಮುಖಂಡರಾದ ಬಸವರಾಜ್ ಪಾಟೀಲ್, ಶಿವಾನಂದ್ ವಡ್ಡೆ, ಶಿವು ಝುಲ್ಫೆ, ನಾಗೇಶ್ ಪತ್ರೆ, ಕಿರಣ್ ಪಾಟೀಲ್, ರಂಗಾರಾವ್ ಜಾಧವ್, ರಾಜಕುಮಾರ್ ಗಾಯಕವಾಡ್, ರಾಜು ಅಲಬಿದೆ, ಬಂಟಿ ರಾಂಪೂರೆ ಹಾಗೂ ಜಾಖೇರ್ ಸೇರಿದಂತೆ ಇತರರು ಇದ್ದರು.