×
Ad

ಬೀದರ್ | ಫೆ.12 ರಂದು ದೆಹಲಿಯಲ್ಲಿ ಬೋಧಗಯಾ ಮುಕ್ತಿ ಆಂದೋಲನ ನಡೆಸಲಾಗುವುದು : ಭಂತೆ ವಿನಾಚಾರ್ಯ

Update: 2025-10-24 20:29 IST

ಬೀದರ್ : ಫೆ.12 ರಂದು ದೆಹಲಿಯಲ್ಲಿ ಬೋಧಗಯಾ ಮಹಾಬೋಧಿ ಮಹಾವಿಹಾರ್ ಮುಕ್ತಿ ಆಂದೋಲನ ನಡೆಸಲಾಗುವುದು ಎಂದು ಬೋಧಗಯಾ ಮಹಾವಿಹಾರ ಮುಕ್ತಿ ಆಂದೋಲನದ ರೂವಾರಿ ಭಂತೆ ವಿನಾಚಾರ್ಯ ಅವರು ತಿಳಿಸಿದರು.

ಇಂದು ಸಾಯಂಕಾಲ ನಗರದ ಶಿವನಗರದಿಂದ ಸಮತಾ ಸೈನಿಕ ದಳದಿಂದ ಬೃಹತ್ ಬೌದ್ಧ ಧಮ್ಮ ಧ್ವಜ ಯಾತ್ರೆ ನಡೆಸಲಾಯಿತು. ಪಥ ಸಂಚಲನದ ವೇಳೆ ಸುರಿದ ಧಾರಕಾರ ಮಳೆಯಲ್ಲಿಯೇ ಭಂತೆಜಿ, ಸಮತಾ ಸೈನಿಕ ದಳದವರು ಹಾಗೂ ಬೌದ್ಧ ಅನುಯಾಯಿಗಳು ಯಾತ್ರೆ ನಡೆಸಿದರು. ಕೊನೆಯಲ್ಲಿ ಅಂಬೇಡ್ಕರ್ ವೃತ್ತದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದು ಇಲ್ಲಿ ಮೊಳಗಿದ ಈ ಧ್ವನಿ ಫೆ.12ರ, 2026 ರಂದು ದೆಹಲಿಯಲ್ಲಿ ಮೊಳಗಬೇಕಿದೆ. ಇಲ್ಲಿನ ಧ್ವನಿ ದೆಹಲಿಯಲ್ಲಿ ಮೊಳಗಿದರೆ ಮೋದಿಯವರ ನಿದ್ದೆ ಹಾಳಾಗುತ್ತದೆ. ಮೋದಿಯವರ ನಿದ್ದೆ ಹಾಳಾದರೆ ಬಿಹಾರದಲ್ಲಿ ಕುಳಿತ ಪಂಡಿತರ ನಿದ್ದೆ ಹಾಳಾಗುತ್ತದೆ. ಯಾವತ್ತು ನಾವು ಬಿಹಾರದಲ್ಲಿನ ಪಂಡಿತರ ನಿದ್ದೆ ಹಾಳು ಮಾಡುತ್ತೇವೆಯೋ ಅದೇ ದಿನ ಅವರು ಬೋಧಗಯಾದ ಮಹಾಬೋಧಿ ಮಹಾವಿಹಾರ ಬಿಟ್ಟು ತಮ್ಮ ಮಂದಿರದ ಒಳಗಡೆ ಓಡಿ ಹೋಗುತ್ತಾರೆ ಎಂದು ಗುಡುಗಿದರು.

134 ವರ್ಷದಿಂದ ಬೌದ್ಧ ಸಾಮಾಜ ಈ ಹೋರಾಟ ನಡೆಸುತ್ತಿದೆ. 1891 ರಲ್ಲಿ ಶ್ರೀಲಂಕಾದ ಭಂತೆ ಧಂಪಾಲ್ ಅವರು ಶ್ರೀಲಂಕಾದಿಂದ ನಡೆದುಕೊಂಡು ಬಂದಿದ್ದರು. ಆವಾಗ ಅವರ ಬೆಂಬಲ ನೀಡುವುದಕ್ಕೆ ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳಲ್ಲಿ ಬೌದ್ಧರ ಜನಸಂಖ್ಯೆ ಇರಲಿಲ್ಲ. ಪಶ್ಚಿಮ ಬಂಗಾಳ, ಓಡಿಸ್ಸಾ ಹಾಗೂ ಕರ್ನಾಟಕದಲ್ಲಿ ಒಂದಿಷ್ಟು ಬೌದ್ಧರಿದ್ದು, ಅವರಿಗೆ ಬೆಂಬಲ ನೀಡಿದ್ದರು. ಇವಾಗ ಇನ್ನೊಂದು ಸಲ ಆ ಹೋರಾಟಕ್ಕೆ ಕರ್ನಾಟಕದ ಬೌದ್ಧ ಜನರ ಬೆಂಬಲ ನೀಡುವ ಸಮಯ ಬಂದಿದೆ. ಈ ಸಲ ಮಹಾಬೋಧಿ ಮಹಾವಿಹಾರ ಮುಕ್ತ ಮಾಡಿ ತೋರಿಸಬೇಕಾಗಿದೆ ಎಂದರು.

ಡಾ. ಅಂಬೇಡ್ಕರ್ ಅವರು 1956ರಲ್ಲಿ ಬೌದ್ಧ ಧಮ್ಮ ದೀಕ್ಷೆ ನೀಡಿದರು. ಈ ಸಮಾಜಕ್ಕೆ ಸ್ವಾಭಿಮಾನದಿಂದ ಬದುಕಲು ಕಲಿಸಿದರು. ಮಹಾಬೋಧಿ ಮಹಾವಿಹಾರ ಮುಕ್ತ ಮಾಡಿ ಜಗತ್ತಲ್ಲಿ ಅಂಬೇಡ್ಕರ್ ಅವರ ಸಮ್ಮಾನ ಇನ್ನಷ್ಟು ಹೆಚ್ಚಿಸುವುದಕ್ಕಾಗಿ ನೀವು ಪ್ರತಿಜ್ಞೆ ಮಾಡಬೇಕು ಎಂದು ಕೋರಿದರು.

ಭಂತೆ ಸಂಘರಖ್ಖಿತ್ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಭಂತೆಗಳಾದ ಸಾಕ್ಯಪುತ್ರ ರಾಹುಲ್, ಭಂತೆ ಧಮ್ಮಾನಂದ, ಧಮ್ಮಪಾಲ್, ಚಿಂತಕ ಸೋಮಶೇಖರ್, ಬೌದ್ಧ ಅನುಯಾಯಿಗಳಾದ ರಾಜಪ್ಪಾ ಗೋನಳ್ಳಿಕರ್, ಅನಿಲಕುಮಾರ್ ಬೆಲ್ದಾರ್, ಕಾಶೀನಾಥ್ ಚಲ್ವಾ ಹಾಗೂ ಮಹೇಶ್ ಗೊರನಾಳಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News