ಬೀದರ್: ಭಾಲ್ಕಿ ತಾಲೂಕಿನ ಧನ್ನೂರ್ ಪೊಲೀಸ್ ಠಾಣೆ ಆವರಣದಲ್ಲಿಯೇ ಎರಡು ಗುಂಪಿನ ನಡುವೆ ಹೊಡೆದಾಟ ನಡೆದು ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ.

ಗರ್ಮಾ ತಾಂಡಾದಲ್ಲಿ ಮಹಿಳೆಯೊಬ್ಬರು ತನ್ನ ಮಗನಿಗೆ ಬೈಯುತ್ತಿದ್ದ ವೇಳೆ ಸುಭಾಷ್ ಎಂಬ ವ್ಯಕ್ತಿ ಮಹಿಳೆಯೊಂದಿಗೆ ವಾಗ್ವಾದ ನಡೆಸಿ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ಮಹಿಳೆ ತಾಂಡಾದಲ್ಲಿದ್ದ ಸಂಬಂಧಿಕರು ಹಾಗೂ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದು, 6ರಿಂದ 8 ಮಂದಿ ಸ್ಥಳಕ್ಕೆ ಬಂದು ಸುಭಾಷ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತೆರಳಿ ಎರಡೂ ಕಡೆಯವರನ್ನು ಧನ್ನೂರ್ ಪೊಲೀಸ್ ಠಾಣೆಗೆ ಕರೆತಂದಿದ್ದರು.

ಪೊಲೀಸ್ ಠಾಣೆ ಆವರಣದಲ್ಲಿ ಎಲ್ಲರೂ ನಿಂತಿದ್ದ ವೇಳೆ ಮತ್ತೊಬ್ಬ ವ್ಯಕ್ತಿ ಸುಭಾಷ್ ಮೇಲೆ ರಾಡ್ (ಶಾಕ್ ಅಬ್ಜಾರ್ಬರ್) ಬಳಸಿ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗಿದೆ. ಹಲ್ಲೆಯಲ್ಲಿ ಸುಭಾಷ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಬೀದರ್ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸ್ ಠಾಣೆ ಆವರಣದಲ್ಲಿಯೇ ಹಲ್ಲೆ ನಡೆದಿರುವುದು ಸಾರ್ವಜನಿಕ ಸುರಕ್ಷತೆ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor