Bidar | ಬಿಎಸ್‌ಎಸ್‌ಕೆ ಕಾರ್ಖಾನೆಯ ಪುನಶ್ಚೇತನಕ್ಕೆ ಸರಕಾರ ಮುಂದಾಗಲಿ : ಅರವಿ ಬಸವನಗೌಡ
ಸೆ. 27ರಂದು ಬೆಳಗಾವಿಯಲ್ಲಿ ರಾಜ್ಯ ಮಟ್ಟದ ಬೃಹತ್ ಸಕ್ಕರೆ ಕಾರ್ಮಿಕರ ಸಮಾವೇಶ
ಬೀದರ್: ಬಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆಯ ಕಾರ್ಮಿಕರಿಗೆ ಪಾವತಿಸಬೇಕಿರುವ ಸುಮಾರು 100 ಕೋಟಿ ರೂ. ವೇತನ ಬಾಕಿ ಹಾಗೂ 20 ಕೋಟಿ ರೂ. ಇಪಿಎಫ್ ಮೊತ್ತ ಇನ್ನೂ ಬಿಡುಗಡೆಯಾಗಿಲ್ಲ. ಕಾರ್ಖಾನೆ ಮುಚ್ಚಿರುವುದರಿಂದ ಕಾರ್ಮಿಕರು ಮತ್ತು ಅವರ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಸರ್ಕಾರ ಮುಂದಾಗಬೇಕು ಎಂದು ಕರ್ನಾಟಕ ಯುನೈಟೆಡ್ ಶುಗರ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಅರವಿ ಬಸವನಗೌಡ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಸುಮಾರು 82 ಸಕ್ಕರೆ ಕಾರ್ಖಾನೆಗಳಲ್ಲಿ ತ್ರಿಪಕ್ಷೀಯ ವೇತನ ಸಮಿತಿಯ ನಿಯಮಗಳನ್ನು ಜಾರಿಗೊಳಿಸಿಲ್ಲ ಎಂದು ಆರೋಪಿಸಿದರು. ಕನಿಷ್ಠ ವೇತನವೂ ನೀಡದೆ ಕಾರ್ಮಿಕರಿಂದ ಕೇವಲ 8,000 ರೂ. ರಿಂದ 10,000 ರೂ. ಸಂಬಳಕ್ಕೆ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ ಎಂದು ದೂರಿದರು.
ರಾಜ್ಯದ ಬಹುತೇಕ ಸಕ್ಕರೆ ಕಾರ್ಖಾನೆಗಳು ಶಾಸಕರು, ಸಚಿವರು ಹಾಗೂ ಪ್ರಭಾವಿ ರಾಜಕಾರಣಿಗಳ ಒಡೆತನದಲ್ಲಿರುವುದರಿಂದ ಕಾರ್ಮಿಕ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲು ಅಸಹಾಯಕರಾಗಿದ್ದಾರೆ ಎಂದು ಅವರು ಹೇಳಿದರು.
ಸಹಕಾರಿ ರಂಗದ ಸಕ್ಕರೆ ಕಾರ್ಖಾನೆಗಳನ್ನು 30 ವರ್ಷಗಳ ದೀರ್ಘಾವಧಿಗೆ ಖಾಸಗಿಯವರಿಗೆ ಗುತ್ತಿಗೆಗೆ ನೀಡುತ್ತಿರುವುದು ರೈತರು ಮತ್ತು ಕಾರ್ಮಿಕರಿಗೆ ಯಾವುದೇ ಪ್ರಯೋಜನ ತರುತ್ತಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಕಾರ್ಮಿಕರ ಸಮಸ್ಯೆಗಳ ಕುರಿತು ಚಾಮರಾಜನಗರದಿಂದ ಬೀದರ್‌ವರೆಗೆ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ. ಸರ್ಕಾರ ಸೂಕ್ತ ಸ್ಪಂದನೆ ನೀಡದಿದ್ದರೆ ಸೆಪ್ಟೆಂಬರ್ 27ರಂದು ಬೆಳಗಾವಿಯಲ್ಲಿ ಹಾಗೂ ಬಳಿಕ ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಮೇಟಿ ಮಾತನಾಡಿ, ಸಕ್ಕರೆ ಕಾರ್ಮಿಕರ ಉದ್ಯೋಗ ಭದ್ರತೆ ಹಾಗೂ ತ್ರಿಪಕ್ಷೀಯ ವೇತನ ಮಂಡಳಿ ಶಿಫಾರಸ್ಸುಗಳನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಸೆಪ್ಟೆಂಬರ್ 27ರಂದು ಬೆಳಗಾವಿಯಲ್ಲಿ ರಾಜ್ಯ ಮಟ್ಟದ ಬೃಹತ್ ಸಕ್ಕರೆ ಕಾರ್ಮಿಕರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಫೆಡರೇಷನ್ ಕಾರ್ಯಾಧ್ಯಕ್ಷ ಜಿ.ಎಸ್ ಚಕ್ರಪಾಣಿ, ಎಐಯುಟಿಯುಸಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಎಸ್.ಎಂ ಶರ್ಮಾ, ಆಳಂದ್ ಎನ್ಎಸ್ಎಲ್ ಸಕ್ಕರೆ ಕಾರ್ಖಾನೆಯ ಕಾರ್ಮಿಕ ಮುಖಂಡ ಶರಣಬಸಪ್ಪ ಕಲಶೆಟ್ಟಿ ಹಾಗೂ ಶಾಂತಪ್ಪ ಹಳ್ಳಿಖೇಡ್ ಸೇರಿದಂತೆ ಇತರರು ಇದ್ದರು.