ಬೀದರ್ | ಮಾದಕ ವಸ್ತುಗಳ ಪ್ರಭಾವಕ್ಕೊಳಗಾದ ಮಕ್ಕಳಿಗೆ ನೈತಿಕ ಮಾರ್ಗದರ್ಶನ ಅಗತ್ಯ : ಪಿಎಸ್ಐ ಚಂದ್ರಶೇಖರ್ ನಿರ್ಣೆ
ಕೊಳ್ಳೂರ ಗ್ರಾಮದಲ್ಲಿ ʼಮನೆ ಮನೆಗೆ ಪೊಲೀಸ್ʼ ಕಾರ್ಯಕ್ರಮ
ಔರಾದ್ : ಆನ್ಲೈನ್ ಬೆಟ್ಟಿಂಗ್ ಹಾಗೂ ಮಾದಕ ವಸ್ತುಗಳ ಪ್ರಭಾವದಿಂದ ಮಕ್ಕಳು ದಾರಿ ತಪ್ಪುತ್ತಿರುವುದರಿಂದ ಅವರಿಗೆ ಉತ್ತಮ ವಿದ್ಯಾಭ್ಯಾಸ ಹಾಗೂ ನೈತಿಕ ಮಾರ್ಗದರ್ಶನ ನೀಡಬೇಕು ಎಂದು ಚಿಂತಾಕಿ ಪೋಲಿಸ್ ಠಾಣೆಯ ಪಿಎಸ್‌ಐ ಚಂದ್ರಶೇಖರ್ ನಿರ್ಣೆ ಅವರು ಹೇಳಿದರು.
ಇಂದು ತಾಲೂಕಿನ ಕೊಳ್ಳೂರ ಗ್ರಾಮದಲ್ಲಿ ಚಿಂತಾಕಿ ಪೊಲೀಸ್ ಠಾಣೆ ವತಿಯಿಂದ ನಡೆದ ಮನೆ ಮನೆಗೆ ಪೊಲೀಸ್ ಎನ್ನುವ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರು ರಂಗೋಲಿ ಹಾಕುವಾಗ ಅಥವಾ ಮಾರುಕಟ್ಟೆಗೆ ತೆರಳುವ ಸಂದರ್ಭಗಳಲ್ಲಿ ಒಡವೆ ಕಳ್ಳತನದ ಪ್ರಕರಣಗಳು ಹೆಚ್ಚಾಗಿವೆ. ಆದ್ದರಿಂದ ಮಹಿಳೆಯರು ಎಚ್ಚರಿಕೆ ವಹಿಸಬೇಕು ಎಂದರು.
ಹೆಣ್ಣು ಮಕ್ಕಳನ್ನು ಚುಡಾಯಿಸುವುದು, ಅಪ್ರಾಪ್ತ ವಯಸ್ಸಿನಲ್ಲಿ ಮದುವೆ ಮಾಡುವುದು, ಡ್ರಗ್ಸ್ ಬಳಕೆ ಇತ್ಯಾದಿ ಅಪರಾಧಗಳು ನಡೆದದ್ದು ಕಂಡು ಬಂದರೆ ತಕ್ಷಣವೇ 112 ಗೆ ಕರೆ ಮಾಡಿ ಅಥವಾ ನೇರವಾಗಿ ನಮಗೆ ಕರೆ ಮಾಡಿ ತಿಳಿಸಬೇಕು ಎಂದು ಅವರು ಸಾರ್ವಜನಿಕರಿಗೆ ಸೂಚಿಸಿದರು.
ಕ್ರೈಂ ಪಿಎಸ್ಐ ಬಸವರಾಜ್ ಕೋಟೆ ಅವರು ಮಾತನಾಡಿ, ಪೊಲೀಸ್ ವ್ಯವಸ್ಥೆ ಬಗ್ಗೆ ಜನರಲ್ಲಿರುವ ಆತಂಕ ದೂರ ಮಾಡಲು ಸ್ಥಳೀಯ ಪೊಲೀಸ್ ಸಿಬ್ಬಂದಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸ್ಥಳೀಯರಿಂದ ಸೂಕ್ಷ್ಮ ಮಾಹಿತಿಗಳನ್ನು ಪಡೆದುಕೊಳ್ಳಲು, ಅಪರಾಧಗಳನ್ನು ತಡೆಯಲು ಹಾಗೂ ಅಪರಾಧ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ಪತ್ತೆ ಮಾಡಲು ಸಾಧ್ಯವಾಗುತ್ತದೆ. ಪೊಲೀಸ್ ವ್ಯವಸ್ಥೆಯಲ್ಲಿ ಸಾರ್ವಜನಿಕ ಸಹಭಾಗಿತ್ವ ಹೆಚ್ಚಾಗಿ, ಇಲಾಖೆ, ಸಾರ್ವಜನಿಕ ಸ್ನೇಹಿಯಾಗಿಸಿ ಸಮಾಜಕ್ಕೆ ಉತ್ತಮ ಪೊಲೀಸ್ ಸೇವೆ ಒದಗಿಸಬಹುದಾಗಿದೆ ಎಂದು ಹೇಳಿದರು.
ಕೊಳ್ಳೂರ ಗ್ರಾಮದ ಮುಖಂಡ ಅಶೋಕ್ ಅವರು ಮಾತನಾಡಿ, ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಾಮರಸ್ಯದಿಂದ ಇರಬೇಕು. ಸರ್ಕಾರದಿಂದ ಆಯೋಜಿಸಲಾದ ಈ ಕಾರ್ಯಕ್ರಮಗಳಲ್ಲಿ ಅಧಿಕಾರಿಗಳು ಮತ್ತು ಸಾರ್ವಜನಿಕರ ಸಹಭಾಗಿತ್ವ ಅತ್ಯಂತ ಮುಖ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಶ್ರೀಪತಿ, ಬಂಡೆಪ್ಪ ದೇಗಲವಾಡೆ, ಮೊಹಿನ ಸೌದಾಗರ್, ಕಾಶಿನಾಥ್ ಸ್ವಾಮಿ, ಧ್ಯಾನೆಶ್ವರ್ ಮದನುರೆ, ಬಸಪ್ಪ ಹುಪಳೆ, ಸಿದ್ದಪ್ಪ ಕಂಗಟೆ, ಸುರೇಶ್ ಸೋಮಾ, ರಾಹುಲ್ ಹಾಗೂ ನಾಗನಾಥ್ ಸೇರಿದಂತೆ ಇತರರು ಇದ್ದರು.