×
Ad

ಬೀದರ್ ನಾಗರಿಕ ಸನ್ಮಾರ್ಗ ಸಮಿತಿಯಿಂದ ತಂಬಾಕು ಮುಕ್ತ ಜಿಲ್ಲೆಯ ಅಭಿಯಾನ : ಸ್ಟಿಕ್ಕರ್ ಬಿಡುಗಡೆಗೊಳಿಸಿದ ಎಸ್ಪಿ ಪ್ರದೀಪ್ ಗುಂಟಿ

Update: 2025-10-29 18:32 IST

ಬೀದರ್ : ನಾಗರಿಕ ಸನ್ಮಾರ್ಗ ಸಮಿತಿಯಿಂದ ಬೀದರ್ ಜಿಲ್ಲೆಯನ್ನು ತಂಬಾಕು ಮುಕ್ತಗೊಳಿಸಲು ಅಭಿಯಾನ ಆರಂಭಿಸಿದ್ದು, ಈ ಅಭಿಯಾನದ ಸ್ಟಿಕ್ಕರ್ ಅನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಇಂದು ಬಿಡುಗಡೆಗೊಳಿಸಿದರು.

ಸ್ಟಿಕರ್ ಬಿಡುಗಡೆಗೊಳಿಸಿದ ನಂತರ ಮಾತನಾಡಿದ ಎಸ್ಪಿ ಪ್ರದೀಪ್ ಗುಂಟಿ ಅವರು, ಬೀದರ್ ನಾಗರಿಕ ಸನ್ಮಾರ್ಗ ಸಮಿತಿಯು ಯುವ ಜನರನ್ನು ದುಶ್ಚಟಗಳಿಂದ ದೂರ ಇರಿಸಲು ತಂಬಾಕು ಉತ್ಪನ್ನಗಳ ವಿರುದ್ಧ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.

ಬೀದರ್ ನಾಗರಿಕ ಸನ್ಮಾರ್ಗ ಸಮಿತಿಯ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ಅವರು ಮಾತನಾಡಿ, ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಬೀದರ್ ನಾಗರಿಕ ಸನ್ಮಾರ್ಗ ಸಮಿತಿಯು ಸಮಾಜದಲ್ಲಿ ಒಳ್ಳೆಯದನ್ನು ಪಸರಿಸಲು ಹಾಗೂ ಕೆಟ್ಟದನ್ನು ಹೋಗಲಾಡಿಸಲು ವಿವಿಧ ಚಟುವಟಿಕೆಗಳನ್ನು ನಡೆಸಲಿದೆ. ಮೊದಲ ಹಂತದಲ್ಲಿ ಬೀದರ್ ನಗರ ತಂಬಾಕು ಮುಕ್ತಗೊಳಿಸುವ ಅಭಿಯಾನ ಆರಂಭಿಸಲಾಗಿದೆ ಎಂದರು.

ಸಮಿತಿಯು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದ ವ್ಯಾಪಾರಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಿದೆ. ತಂಬಾಕು ಉತ್ಪನ್ನಗಳ ವಿರುದ್ಧ ಜನ ಜಾಗೃತಿಯ ಸ್ಟಿಕ್ಕರ್, ಪೋಸ್ಟರ್ ಗಳನ್ನು ಅಂಟಿಸಲಿದೆ. ದೇವರು ಬದುಕುವುದಕ್ಕಾಗಿ ಸಾಕಷ್ಟು ವಸ್ತುಗಳ ಮಾರಾಟಕ್ಕೆ ಅವಕಾಶ ಕೊಟ್ಟಿದ್ದಾನೆ. ಹೀಗಾಗಿ ವ್ಯಾಪಾರಿಗಳು ಜನ ಹಿತದ ವಸ್ತುಗಳನ್ನು ಮಾರಾಟ ಮಾಡಬೇಕು ಎಂದು ನುಡಿದರು.

ಜನರ ಜೀವಕ್ಕೆ ಮಾರಕವಾದ ತಂಬಾಕು ಉತ್ಪನ್ನಗಳ ಮಾರಾಟ ಮಾಡದಿರಲು ಸಂಕಲ್ಪ ತೊಡಬೇಕು. ಶಾಲಾ, ಕಾಲೇಜುಗಳ 100 ಮೀಟರ್ ವ್ಯಾಪ್ತಿಯೊಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಬಾರದೆಂಬ ನಿಯಮ ಪಾಲಿಸಬೇಕು. ಬೀದರ್ ನಗರ ಹಾಗೂ ಜಿಲ್ಲೆಯನ್ನು ತಂಬಾಕು ಉತ್ಪನ್ನ ಮುಕ್ತಗೊಳಿಸಲು ಸಂಘ ಸಂಸ್ಥೆಗಳು ಹಾಗೂ ನಾಗರಿಕರು ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.

ಇಂದು ಗವಾನ್ ಚೌಕ್, ನಗರದ ಮುಖ್ಯ ರಸ್ತೆ ಸೇರಿದಂತೆ ನಗರದ ವಿವಿಧೆಡೆ ಗುಟ್ಕಾ, ಸಿಗರೇಟ್ ಸೇರಿದಂತೆ ತಂಬಾಕು ಉತ್ಪನ್ನ ಮಾರಾಟ ಮಾಡದ ಅಂಗಡಿಗಳ ಮಾಲಕರನ್ನು ಸಮಿತಿಯ ಪದಾಧಿಕಾರಿಗಳು ಸನ್ಮಾನಿಸಿದರು. ವ್ಯಕ್ತಿ ಹಾಗೂ ಸಮಾಜದ ಸ್ವಾಸ್ಥ್ಯಕ್ಕೆ ಮಾರಕವಾದ ಉತ್ಪನ್ನಗಳನ್ನು ಮಾರಾಟ ಮಾಡದಿರುವ ಅವರ ಕಾರ್ಯವನ್ನು ಮುಕ್ತ ಕಂಠದಿಂದ ಪ್ರಶಂಶಿಸಿದರು.

ಅಂಗಡಿಗಳ ಮುಂಭಾಗದಲ್ಲಿ 'ನಾವೆಲ್ಲರೂ ಆರೋಗ್ಯಕರ ಜೀವನ ನಡೆಸಲು ಗುಟ್ಕಾ ಮತ್ತು ಸಿಗರೇಟ್ ಮಾರಾಟ ಮಾಡುವುದಿಲ್ಲ' ಎಂಬ ಬರಹದ ಸ್ಟಿಕ್ಕರ್ ಅಂಟಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಕಾರ್ಯದರ್ಶಿ ಅಶೋಕ್ ವಡಗಾವೆ, ಮನೋಹರ್ ದಂಡೆ, ಅಶ್ಫಾಕ್ ಮೆಟ್ರೊ, ಮೌಲಾನಾ ಸಿರಾಜುದ್ದೀನ್, ಮೌಲಾನಾ ಮೋನಿಸ್ ಕಿರ್ಮಾನಿ, ನಿವೃತ್ತ ಎಇಇ ಮಕ್ಸೂದ್ ಖಾನ್, ಶಂಭುಲಿಂಗ್ ವಾಲ್ದೊಡ್ಡಿ, ಟೌನ್ ಸಿಪಿಐ, ಪಿಎಸ್‍ಐ ತಸ್ಲಿಮ್ ಸೇರಿದಂತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News