×
Ad

ಬೀದರ್ | ದೇಶ ರಕ್ಷಣೆಗೆ ಮಾಜಿ ಸೈನಿಕರ ಕೊಡುಗೆ ಅಪಾರ : ಸೂರ್ಯಕಾಂತ್ ನಾಗಮಾರಪಳ್ಳಿ

Update: 2025-10-27 22:05 IST

ಬೀದರ್ : ಅಂದಿನ ದಿನಗಳಲ್ಲಿ ದೇಶ ರಕ್ಷಣೆಗೆ ಇಂದಿನ ಮಾಜಿ ಸೈನಿಕರ ಕೊಡುಗೆ ಅಪಾರವಾಗಿದೆ ಎಂದು ಜೆಡಿಎಸ್ ಮುಖಂಡ ಸೂರ್ಯಕಾಂತ್ ನಾಗಮಾರಪಳ್ಳಿ ಅವರು ಹೇಳಿದರು.

ನಗರದ ಡಾ.ಚನ್ನಬಸವ ಪಟ್ಟದೇವರ ರಂಗಮಂದಿರದಲ್ಲಿ ನಡೆದ ಮಾಜಿ ಸೈನಿಕರ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾಜಿ ಸೈನಿಕರು ದೇಶಕ್ಕಾಗಿ ಅದ್ಭುತ ಸೇವೆ ಸಲ್ಲಿಸಿದ್ದಾರೆ. ಗಡಿಯಲ್ಲಿ ನಿಂತು ಶತ್ರುಗಳು ದೇಶದ ಒಳಗೆ ನುಗ್ಗದಂತೆ ಕಾವಲು ಕಾದಿರುವ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಸೇವೆಯನ್ನು ಪರಿಗಣಿಸಿ, ಇಂದಿನ ಪೀಳಿಗೆ ಮಾಜಿ ಸೈನಿಕರಿಗೆ ಗೌರವ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ಮಾಜಿ ಸೈನಿಕರ ಕಷ್ಟ, ಸುಖಗಳಲ್ಲಿ ನಾಗಮಾರಪಳ್ಳಿ ಪರಿವಾರ ಸದಾ ಇರುತ್ತದೆ. ಗುರುಪಾದಪ್ಪ ನಾಗಮಾರಪಳ್ಳಿ ಆಸ್ಪತ್ರೆಯಲ್ಲಿ ಮಾಜಿ ಸೈನಿಕರಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ಅವರು ಭರವಸೆ ನೀಡಿದರು.

ಮುಖ್ಯ ಅತಿಥಿ ಈಶ್ವರಸಿಂಗ್ ಠಾಕೂರ್ ಅವರು ಮಾತನಾಡಿ, ಅಂದಿನ ಕಾಲದಲ್ಲಿ ಸೈನಿಕರ ಕೈಯಲ್ಲಿ ಅತ್ಯಾಧುನಿಕ ಉಪಕರಣಗಳು ಇರಲಿಲ್ಲ. ಆದರೂ ಅವರು ದೇಶದ ಗಡಿಯನ್ನು ಸಮರ್ಥವಾಗಿ ರಕ್ಷಿಸಿದ್ದರು. ಇಂದಿಗೂ ಭಾರತೀಯ ಸೈನ್ಯವು ಅದೇ ಶೌರ್ಯದಿಂದ ದೇಶದ ಭದ್ರತೆ ಕಾಪಾಡುತ್ತಿದೆ ಎಂದು ಹೇಳಿದರು.

ಮಾಜಿ ಸೈನಿಕ ಸಂಘದ ಗೌರವಾಧ್ಯಕ್ಷ ಅಶೋಕಕುಮಾರ್ ಕರಂಜಿ ಅವರು ಮಾತನಾಡಿ, ಅ.20 , 1975ರಲ್ಲಿ ಬೀದರ್ ಜಿಲ್ಲೆಯ ಚಿಟಗುಪ್ಪದಲ್ಲಿ ಸಂಘ ಸ್ಥಾಪನೆ ಮಾಡಲಾಯಿತು. 1982ರಲ್ಲಿ ಸರ್ಕಾರದಿಂದ ನಿವೇಶನ ದೊರೆತಿದ್ದು, 2007–08ರಲ್ಲಿ ಮಾಜಿ ಸೈನಿಕರ ಕರ ನಿವೇಶನ ವಿನಾಯಿತಿಯನ್ನು ಸಾಧಿಸಲಾಯಿತು. ಬೀದರ್ ಜಿಲ್ಲೆಯ ಮಾಜಿ ಸೈನಿಕರ ಸತತ ಪ್ರಯತ್ನದಿಂದ ಈಗ ECHS ಆಸ್ಪತ್ರೆ ಇಲ್ಲಿನ ಏರ್ ಫೋರ್ಸ್ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನೂರಾರು ಮಾಜಿ ಸೈನಿಕರು ದಿನನಿತ್ಯ ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಶಿನಾಥ್ ಬೆಲ್ದಾಳೆ, ಜಿಲ್ಲಾಧ್ಯಕ್ಷ ಪಾಂಡಪ್ಪ ಮೇತ್ರಿ ಸೇರಿದಂತೆ ಹಲವರು ಮಾತನಾಡಿದರು.

ಈ ಸಂದರ್ಭದಲ್ಲಿ ಕರ್ನಲ್ ದೀಪಕ್ ಚೌಕಡ್, ವೆಂಕಟರಾವ್ ತೆಲಂಗ್, ಶಿವಕುಮಾರ್, ಎಂ.ಕೆ.ಹಬೀಬೋದ್ದಿನ್, ತುಕ್ಕಪ್ಪ, ಧನರಾಜ್, ಮೋಹನ್ ಬಚ್ಚಾ, ಶಂಕರಾವ್ ಬಿರಾದರ್, ರಾಜೇಶ್ ಚೆಲುವಾ ಹಾಗೂ ವೆಂಕಟರಾವ್ ಜಾಧವ್ ಸೇರಿದಂತೆ ಅನೇಕ ಮಾಜಿ ಸೈನಿಕರು ಮತ್ತು ಮಹಾರಾಷ್ಟ್ರದ ಮಾಜಿ ಸೈನಿಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News