ಕನ್ನೇರಿ ಶ್ರೀಗಳು ಬಸವಕಲ್ಯಾಣಕ್ಕೆ ಬರಲು ಹೈಕೊರ್ಟ್ ಅನುಮತಿ ನೀಡಿದೆ : ಗುಂಡುರೆಡ್ಡಿ
ಬಸವಕಲ್ಯಾಣ : ಜೂ.28ರಂದು ನಡೆಯಲಿರುವ ಬಸವಾದಿ ಶಿವಶರಣ ಹಿಂದೂ ಸಮಾವೇಶಕ್ಕೆ ಕಲಬುರಗಿ ಹೈಕೋರ್ಟ್ ಪೀಠ ಅನುಮತಿ ನೀಡಿದ್ದು, ಕನ್ನೇರಿ ಶ್ರೀಗಳಿಗೆ ಬಸವಕಲ್ಯಾಣಕ್ಕೆ ಆಗಮಿಸಲು ಅವಕಾಶ ದೊರೆತಿರುವುದನ್ನು ಸ್ವಾಗತಿಸಿ ಭಕ್ತರು ಹಾಗೂ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶದ ಕಾರ್ಯಾಧ್ಯಕ್ಷ ಗುಂಡುರೆಡ್ಡಿ ಅವರ ನೇತೃತ್ವದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪಟಾಕಿ ಸಿಡಿಸಿ ಹಾಗೂ ಸಿಹಿ ಹಂಚುವ ಮೂಲಕ ನೂರಾರು ಭಕ್ತರು ಮತ್ತು ಕಾರ್ಯಕರ್ತರು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗುಂಡುರೆಡ್ಡಿ, ಕನ್ನೇರಿ ಶ್ರೀಗಳು ಬಸವಕಲ್ಯಾಣಕ್ಕೆ ಬರಲು ಹೈಕೋರ್ಟ್ ಅನುಮತಿ ನೀಡಿರುವುದು ನಮಗೆ ಸಂದ ಜಯವಾಗಿದೆ. ನ್ಯಾಯಾಲಯದ ಮೇಲೆ ನಮಗೆ ಮೊದಲಿನಿಂದಲೂ ನಂಬಿಕೆ ಇತ್ತು. ಸಮಾವೇಶ ಅತ್ಯಂತ ಯಶಸ್ವಿಯಾಗಿ ನಡೆಯಲಿದೆ ಎಂದು ಹೇಳಿದರು.
ಜಾತಿ, ಧರ್ಮ ಹಾಗೂ ರಾಜಕೀಯ ಭೇದ ಮರೆತು ಎಲ್ಲರ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಲಿದೆ. ವಿವಿಧ ರಾಜ್ಯಗಳಿಂದ ಸಾವಿರಾರು ಭಕ್ತರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಯಾವುದೇ ಗೊಂದಲವಿಲ್ಲದೆ ಕಾರ್ಯಕ್ರಮ ಶಾಂತಿಯುತವಾಗಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಸವೇಶ್ವರ ಮಂದಿರದಿಂದ ಅಕ್ಕಮಹಾದೇವಿ ಆವರಣದವರೆಗೆ ಮಹಿಳೆಯರು ಕಳಸ ಹೊತ್ತು, ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.
ಕನ್ನೇರಿ ಶ್ರೀಗಳು ಕಾರ್ಯಕ್ರಮದಲ್ಲಿ ಮಾತನಾಡುವುದಕ್ಕೆ ಸಂಬಂಧಿಸಿದಂತೆ ಕೆಲ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಆದರೆ, ನ್ಯಾಯಾಲಯದ ಆದೇಶದ ಪ್ರತಿ ಬಂದ ಬಳಿಕವೇ ಅದರ ಬಗ್ಗೆ ಸ್ಪಷ್ಟತೆ ಸಿಗಲಿದೆ. ಆದೇಶ ಪತ್ರ ನಾಳೆ ಲಭ್ಯವಾಗುವ ಸಾಧ್ಯತೆಯಿದೆ ಎಂದು ನಮ್ಮ ವಕೀಲರು ತಿಳಿಸಿದ್ದಾರೆ ಎಂದು ಹೇಳಿದರು.
“ಯಾವುದೇ ಷರತ್ತುಗಳಿದ್ದರೂ ಕನ್ನೇರಿ ಶ್ರೀಗಳ ಪಾದ ಬಸವಕಲ್ಯಾಣದಲ್ಲಿ ಬೀಳುತ್ತಿರುವುದೇ ನಮಗೆ ಸಂತಸ ತಂದಿದೆ. ನಮ್ಮ ಕಾರ್ಯಕ್ರಮ ಯಾರ ಪರ ಅಥವಾ ವಿರೋಧವಾಗಿಲ್ಲ. ಎಲ್ಲರನ್ನೂ ಒಗ್ಗೂಡಿಸುವ ಉದ್ದೇಶದಿಂದ ಸಮಾವೇಶ ಆಯೋಜಿಸಲಾಗಿದೆ” ಎಂದು ಗುಂಡುರೆಡ್ಡಿ ಹೇಳಿದರು.
ಈ ಸಂದರ್ಭದಲ್ಲಿ ಸುನೀಲ್ ಪಾಟೀಲ್, ದೀಪಕ್ ಗಾಯಕ್ವಾಡ್, ಶ್ರಿಕಾಂತ್, ರಾಮ್ ಜಾಧವ್, ದತ್ತು ಬೆಂಡೆ, ಶರಣು ಆಲಗೂಡ್, ರವಿ ನಾವದ್ಗೆಕರ್, ವಿನೋದ್ ಬಡ್ಗೆಕರ್ ಸೇರಿದಂತೆ ಹಲವರಿದ್ದರು.