ಪ್ರತಿಯೊಬ್ಬ ಮತದಾರನ ಹಕ್ಕು ಉಳಿಸಲು ಶ್ರಮಿಸಿ : ಸಂಸದ ಸಾಗರ್ ಖಂಡ್ರೆ
ಔರಾದ್: ರಾಜ್ಯದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯ ಆರಂಭವಾಗಿದ್ದು, ಪ್ರತಿಯೊಂದು ಮತವೂ ಅಮೂಲ್ಯವಾಗಿದೆ. ಪಕ್ಷದ ಕಾರ್ಯಕರ್ತರು ಹದ್ದಿನ ಕಣ್ಣಿನಂತೆ ಎಚ್ಚರಿಕೆ ವಹಿಸಿ ಪ್ರತಿಯೊಬ್ಬ ಮತದಾರನ ಹಕ್ಕನ್ನು ಉಳಿಸುವ ಮೂಲಕ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸಬೇಕು ಎಂದು ಸಂಸದ ಸಾಗರ್ ಖಂಡ್ರೆ ಕರೆ ನೀಡಿದರು.
ಪಟ್ಟಣದ ಸಾಯಿ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ಔರಾದ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮತದಾನವಿಲ್ಲದೆ ದೇಶದ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲ. ಆದ್ದರಿಂದ ಜೂನ್ 30ರಿಂದ ಜುಲೈ 29ರವರೆಗೆ ನಡೆಯುವ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಯಾವುದೇ ಕಾರಣಕ್ಕೂ ಲಘುವಾಗಿ ಪರಿಗಣಿಸಬಾರದು ಎಂದು ಅವರು ತಿಳಿಸಿದರು.
ಮತಗಟ್ಟೆ ಏಜೆಂಟರು ಮನೆ ಮನೆಗೆ ಭೇಟಿ ನೀಡಿ ಮತದಾರರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಅಗತ್ಯ ನೆರವು ನೀಡಬೇಕು. ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ವಿಶೇಷ ನಿಗಾವಹಿಸಬೇಕು ಎಂದು ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಡಾ.ಭೀಮಸೇನರಾವ್ ಶಿಂಧೆ, ಭಾಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ್ ಚವ್ಹಾಣ, ಆನಂದ್ ಚವ್ಹಾಣ, ರಾಮಣ್ಣ, ಔರಾದ ತಾಲ್ಲೂಕಾಧ್ಯಕ್ಷ ರಾಜಕುಮಾರ್ ಹಲಬರ್ಗೆ, ಡಾ. ಫಯಾಜ್, ಬಸವರಾಜ್ ನಿಟ್ಟುರೆ, ಚನ್ನಬಸಪ್ಪ ಉಪ್ಪೆ, ಸುಧಾಕರ್ ಕೊಳ್ಳುರ್, ರಾಜಕುಮಾರ್ ಕಂದಗೊಳೆ ಹಾಗೂ ಸಚಿನ್ ಕತ್ತೆ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.