Bidar | ಆಧಾರವಿಲ್ಲದ ಸುಳ್ಳು ಫಾರಂ-7 ಸಲ್ಲಿಕೆ ಆರೋಪ: ಭಾಲ್ಕಿಯಲ್ಲಿ 32 ಜನರ ವಿರುದ್ಧ ಎಫ್‌ಐಆರ್ ದಾಖಲು
ಸಾಂದರ್ಭಿಕ ಚಿತ್ರ | Photo credit : PTI
ಬೀದರ್: ಎಸ್‌ಐಆರ್ ಪ್ರಕ್ರಿಯೆಯಲ್ಲಿ ಆಧಾರವಿಲ್ಲದೆ ಸುಳ್ಳು ಫಾರಂ-7 ಭರ್ತಿ ಮಾಡಿ ಮತದಾರರ ಹೆಸರನ್ನು ಸ್ಥಳಾಂತರ ಅಥವಾ ಗೈರು ಎಂದು ನಮೂದಿಸಿ ಆಕ್ಷೇಪಣೆ ಸಲ್ಲಿಸಲಾಗಿದೆ ಎಂದು ನೀಡಿದ ದೂರಿನ ಮೇರೆಗೆ ಭಾಲ್ಕಿ ನಗರ ಪೊಲೀಸ್ ಠಾಣೆಯಲ್ಲಿ 32 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಪ್ರಕರಣ ದಾಖಲಾದವರಲ್ಲಿ ಶಿವರಾಜ್ ಗಂದಗೆ, ದೀಪಕ್ ಶಿಂಧೆ, ಅಮರ್ ಜಗದೆ, ಬಾಬುರಾವ್ ಧೂಪೆ, ಬಾಲರಾಜ್ ಕೋಟಗೇರಾ, ಚಂದ್ರಕಾಂತ್ ಭಾತಂಬ್ರಾ, ದೇವಾನಂದ ಬಗದೊರೆ, ಗೌಸೋದ್ದೀನ್, ಹಾವಗೆಪ್ಪಾ ಬೆಲ್ಲಾಳೆ, ಜಗದೀಶ್ ಕನ್ನಾಳೆ, ಜಗನ್ನಾಥ್ ಭಾತಂಬ್ರಾ, ಜಗದೀಶ್ವರ್ ಭಾತಂಬ್ರಾ, ಕಲ್ಯಾಣರಾವ್ ಭಾಲ್ಕಿ, ಲಕ್ಷ್ಮಣ ತಳವಾಡ್ (ಕೆ), ಮಧುಕರ್ ಭಾಲ್ಕಿ, ನಾಗನಾಥ್ ವಾಂಜರಖೇಡಾ, ನಲ್ಲಾರೆಡ್ಡಿ ಭಾಲ್ಕಿ, ಪಾಂಡುರಂಗ್ ಕಲನಸೆ, ಪ್ರಮೋದ್ ಭಾಲ್ಕಿ, ರೇವಣಸಿದ್ದಪ್ಪಾ ಭಾಲ್ಕಿ, ಯೋಗೇಶ್ ಭಾಲ್ಕಿ, ಸಂತೋಷ್ ಭೂಸಗುಂಡೆ, ಸತೀಶ್ ಭಾಲ್ಕಿ, ಶಂಕರ್ ಬಿರಾದಾರ್, ಶಿವಕುಮಾರ್ ಭಾಲ್ಕಿ, ಸುನೀಲಕುಮಾರ್ ಭಾಲ್ಕಿ, ವೆಂಕಟ್ ಮೇಹೆಕರ್, ವಿಜಯಕುಮಾರ್ ಭಾಲ್ಕಿ, ಮಲ್ಲಿಕಾರ್ಜುನ್ ಭಾಲ್ಕಿ, ದಿನೇಶ್ ಭಾಲ್ಕಿ, ಬಂಡೇಪ್ಪಾ ಭಾಲ್ಕಿ ಹಾಗೂ ಜೈ ಭೀಮ್ ಧನ್ನೂರ್ ಸೇರಿದ್ದಾರೆ.
ಈ ಕುರಿತು ಮುಹಮ್ಮದ್ ಅತೀಕ್ ಅಹ್ಮದ್ ಅವರು ದೂರು ನೀಡಿದ್ದು, ಭಾಲ್ಕಿಯ ಮಾಸೂಮಪಾಷಾ ಕಾಲೋನಿಯ ಬೂತ್ ನಂಬರ್ 1ರ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದೆ ಎಂದು ತಿಳಿಸಿದ್ದಾರೆ. 2004ರಿಂದ ಎಲ್ಲ ಸಾರ್ವತ್ರಿಕ ಹಾಗೂ ಸ್ಥಳೀಯ ಚುನಾವಣೆಗಳಲ್ಲಿ ತಾವು ಮತ ಚಲಾಯಿಸಿದ್ದಾಗಿ ಹಾಗೂ 2024ರಲ್ಲಿ ಭಾಲ್ಕಿ ನಗರಸಭೆಯ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
2026ರ ಎಸ್‌ಐಆರ್ ಚುನಾವಣಾ ಮತದಾರರ ಪಟ್ಟಿಗಳ ಪರಿಷ್ಕರಣೆ ಸಂದರ್ಭದಲ್ಲಿ ಸೆ.21ರಂದು ಬೆಳಗ್ಗೆ ಅಂದಾಜು 10 ಗಂಟೆಯಿಂದ ಸೆ.22ರವರೆಗೆ ಫಾರಂ-7ರ ಮೂಲಕ ತಮ್ಮ ಹೆಸರು ಸೇರಿದಂತೆ ಒಟ್ಟು ಸುಮಾರು 3,244 ಮತದಾರರನ್ನು ಸ್ಥಳಾಂತರ ಅಥವಾ ಗೈರು ಎಂದು ನಮೂದಿಸಿ ಯಾವುದೇ ಆಧಾರವಿಲ್ಲದೆ ಆಕ್ಷೇಪಣಾ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ಸೆ.27ರಂದು ತಾವು ಹಾಗೂ ಭಾಲ್ಕಿ ವಿಧಾನಸಭಾ ಕ್ಷೇತ್ರದ ಕೆಲವು ಮತದಾರರು ನೋಂದಣಾಧಿಕಾರಿಗಳ ಕಚೇರಿಗೆ ತೆರಳಿ ಈ ಕುರಿತು ವಿಚಾರಿಸಿದಾಗ, ಸೆ.25ರಂದು ಬಿಎಲ್‌ಒಗಳು ಹಾಜರುಪಡಿಸಿದ ಫಾರಂ-7ರ ಆಧಾರದ ಮೇಲೆ ಒಟ್ಟು 3,244 ಅರ್ಜಿಗಳನ್ನು ಪರಿಶೀಲಿಸಿ, ಆಕ್ಷೇಪಣೆದಾರರಿಗೆ ವಿಚಾರಣೆ ನೋಟಿಸ್ ಜಾರಿ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆಕ್ಷೇಪಣೆಗೆ ಸಂಬಂಧಿಸಿದ ದಾಖಲೆಗಳನ್ನು ಹಾಜರುಪಡಿಸುವಂತೆ ಕೆಲವರಿಗೆ ನೋಟಿಸ್ ನೀಡಲಾಗಿದ್ದು, ಅವರು ವಿಚಾರಣೆಗೆ ಹಾಜರಾಗದೆ ಯಾವುದೇ ರೀತಿಯ ಸ್ಪಂದನೆ ನೀಡಿಲ್ಲ ಎಂದು ತಿಳಿಸಿರುವುದಾಗಿ ದೂರಿನಲ್ಲಿ ಹೇಳಲಾಗಿದೆ.
ದೊಡ್ಡ ಪ್ರಮಾಣದಲ್ಲಿ ಆಕ್ಷೇಪಣೆಗಳು ಸಲ್ಲಿಕೆಯಾಗಿರುವುದರಿಂದ ಸಂಶಯಗೊಂಡ ಚುನಾವಣಾ ನೋಂದಣಾಧಿಕಾರಿ ಸೆ.29ರಂದು ಭಾಲ್ಕಿ ತಹಸೀಲ್ ಕಚೇರಿ ಸಭಾಂಗಣದಲ್ಲಿ ಪ್ರಾಥಮಿಕ ವಿಚಾರಣೆ ಕರೆದಿದ್ದರು. ಅಲ್ಲಿ ದಾಖಲೆಗಳನ್ನು ಪರಿಶೀಲಿಸಿದ ಬಳಿಕ, ನಮೂನೆ-7ರ ಅಡಿಯಲ್ಲಿ ಸಲ್ಲಿಸಲಾದ ಒಟ್ಟು 3,244 ಅರ್ಜಿಗಳಲ್ಲಿ ತಮ್ಮ ಹಾಗೂ ಇತರ 3,243 ಅರ್ಹ ಮತದಾರರ ಯಾವುದೇ ದೃಢೀಕೃತ ದಾಖಲೆಗಳನ್ನು ಪಡೆಯದೆ, ತಮ್ಮ ಗಮನಕ್ಕೆ ಬಾರದಂತೆ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.
ಅಲ್ಲದೆ, ನಮೂನೆ-7ರ ಅರ್ಜಿಗಳಲ್ಲಿ ಆರೋಪಿತರು ತಮ್ಮದೇ ವಿವಿಧ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಅರ್ಹ ಮತದಾರರ ಹೆಸರುಗಳನ್ನು ಸ್ಥಳಾಂತರ ಅಥವಾ ಗೈರು ಎಂದು ನಮೂದಿಸಿ ಸುಳ್ಳು ಅರ್ಜಿಗಳನ್ನು ಸಲ್ಲಿಸಿ, ಖೋಟಾ ಸಹಿ ಮಾಡಿರುವುದಾಗಿ ಅವರು ಗಂಭೀರ ಆರೋಪ ಮಾಡಿದ್ದಾರೆ. ಈ ಮೂಲಕ ತಮ್ಮನ್ನು ಹಾಗೂ ಇತರ ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಹಾಕಲು 32 ಜನರು ಹಾಗೂ ಇತರರು ಸೇರಿ ಒಳಸಂಚು ರೂಪಿಸಿ ವ್ಯವಸ್ಥಿತವಾಗಿ ಅಪರಾಧ ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ದೂರಿನಲ್ಲಿ ಹೆಸರಿಸಲಾದ 32 ಜನರು ಹಾಗೂ ಇತರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮುಹಮ್ಮದ್ ಅತೀಕ್ ಅಹ್ಮದ್ ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ.