Bidar | ಮಹಿಳೆಯರ ಪ್ರಗತಿಗೆ ಇಂದಿನ ಬೆಳವಣಿಗೆಗಳು ಪೂರಕವಾಗಿಲ್ಲ: ಕೆ. ನೀಲಾ

ಕಸಾಪದಿಂದ ಜಿಲ್ಲಾ ಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನ

Update: 2026-08-11 18:28 IST

ಬೀದರ್ : ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಶೇ.10ರಷ್ಟೂ ಇಲ್ಲ. ಅನುಭವ ಮಂಟಪದಲ್ಲಿ ಮಹಿಳೆ ಮತ್ತು ಪುರುಷರಿಗೆ ಸಮಾನ ಅವಕಾಶವಿತ್ತು. ಯಾವುದೇ ಭೇದಭಾವ ಇರಲಿಲ್ಲ. ಆದರೆ, ಇಂದಿನ ದಿನಗಳಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಗುರುತಿಸಿಕೊಂಡಿದ್ದರೂ, ಪ್ರಸ್ತುತ ಬೆಳವಣಿಗೆಗಳು ಮಹಿಳೆಯರ ಪರವಾಗಿಲ್ಲ ಎಂದು ಹೋರಾಟಗಾರ್ತಿ ಹಾಗೂ ಸಾಹಿತಿ ಕೆ. ನೀಲಾ ಹೇಳಿದರು.

ಭಾಲ್ಕಿ ಪಟ್ಟಣದ ಕಾರಂಜಾ ರೈತ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕಸಾಪ ತಾಲೂಕು ಘಟಕದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ 3ನೇ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ನೂರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಈವರೆಗೆ ಒಬ್ಬ ಮಹಿಳೆಯೂ ಅಧ್ಯಕ್ಷರಾಗಲು ಸಾಧ್ಯವಾಗಿಲ್ಲ. ಸಾಹಿತ್ಯಕ್ಕೆ ಯಾವುದೇ ಲಿಂಗಭೇದವಿಲ್ಲ. ಸಾಹಿತ್ಯವು ಸರ್ವ ಜನರ ಒಳಿತನ್ನು ಬಯಸುತ್ತದೆ. ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಮಹಿಳೆಯರು ಬರಲು ಸಾಧ್ಯವಾಗಬೇಕು ಎಂದು ಆಶಿಸಿದರು.

ಅನುಭವ ಮಂಟಪದಲ್ಲಿ ಆಯ್ದಕ್ಕಿ ಲಕ್ಕಮ್ಮ, ಸತ್ಯಕ್ಕ, ಸಂಕವ್ವೆ ಹಾಗೂ ಅಕ್ಕಮಹಾದೇವಿಯಂತಹ ಮಹಿಳಾ ವಚನಕಾರ್ತಿಯರು ತಮ್ಮ ವಚನಗಳ ಮೂಲಕ ಸಮಾನತೆಯ ಸಂದೇಶ ಸಾರಿದ್ದರು. ವಚನಕಾರರು ಮತ್ತು ಸೂಫಿ ಸಂತರು ನ್ಯಾಯದ ಪರವಾಗಿ ಮಾತನಾಡುವಾಗ ಭಯಪಡಬಾರದು ಎಂಬುದನ್ನು ಕಲಿಸಿಕೊಟ್ಟಿದ್ದಾರೆ. ಅಧಿಕಾರ ಶಾಶ್ವತವಲ್ಲ; ನ್ಯಾಯ, ಮಾನವೀಯತೆ ಹಾಗೂ ಸಕಲ ಜೀವಿಗಳ ಒಳಿತನ್ನು ಬಯಸುವುದು ಶಾಶ್ವತ ಎಂದು ಹೇಳಿದರು.

ವಚನ ಚಳವಳಿಯ ಪ್ರಮುಖ ಆಶಯಗಳೇ ಇಂದಿನ ಸಂವಿಧಾನದಲ್ಲಿಯೂ ಪ್ರತಿಬಿಂಬಿತವಾಗಿವೆ. ಹೀಗಾಗಿ ಸಂವಿಧಾನವನ್ನು ಉಳಿಸುವುದರ ಜತೆಗೆ ಅದರ ಆಶಯಗಳು ನಮ್ಮ ಬದುಕಿನ ಭಾಗವಾಗಬೇಕು ಮತ್ತು ಪರಿಣಾಮಕಾರಿಯಾಗಿ ಜಾರಿಯಾಗಬೇಕು ಎಂದು ಅವರು ಹೇಳಿದರು.

ಮಹಿಳೆಯರಿಗೆ ಸಾಹಿತ್ಯದಲ್ಲಿ ಹೆಚ್ಚಿನ ಅವಕಾಶ ಸಿಗಬೇಕು :

ಹಿರಿಯ ಸಾಹಿತಿ ಡಾ. ವಿಜಯಲಕ್ಷ್ಮೀ ಬಾಳೆಕುಂದ್ರೆ ಮಾತನಾಡಿ, ಕನ್ನಡವು ಸುಲಲಿತ ಹಾಗೂ ಸುಂದರ ಭಾಷೆಯಾಗಿದ್ದು, ಸ್ವತಂತ್ರ ಲಿಪಿಯನ್ನು ಹೊಂದಿದೆ. ಕನ್ನಡವನ್ನು ಲಿಪಿಗಳ ರಾಣಿ ಎಂದು ಕರೆಯಲಾಗುತ್ತದೆ ಎಂದರು.

ಮಹಿಳೆಯರು ಮುಟ್ಟದ ಸಾಹಿತ್ಯ ಕ್ಷೇತ್ರಗಳಿಲ್ಲ. ಆದರೂ ಈವರೆಗೆ ಯಾವುದೇ ಮಹಿಳೆಗೆ ಜ್ಞಾನಪೀಠ ಪ್ರಶಸ್ತಿ ದೊರೆತಿಲ್ಲ. ನೂರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತಿಗೂ ಒಬ್ಬ ಮಹಿಳೆ ಅಧ್ಯಕ್ಷರಾಗಿಲ್ಲ. ಇದು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂಗತಿ ಎಂದು ಹೇಳಿದರು.

ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಹಾಗೂ ಅಲ್ಲಮಪ್ರಭು ಸೇರಿದಂತೆ ಹಲವು ಶರಣರು ವಚನಗಳನ್ನು ರಚಿಸಿದರೆ, ಅಕ್ಕನಾಗಮ್ಮ ಕೂಡ ಅಪಾರ ಸಂಖ್ಯೆಯ ವಚನಗಳನ್ನು ರಚಿಸಿದ್ದಾರೆ. ಹೆಣ್ಣುಮಕ್ಕಳು ಅಕ್ಕನಾಗಮ್ಮನಂತಹ ಸಾಧಕಿಯರಿಂದ ಪ್ರೇರಣೆ ಪಡೆಯಬೇಕು. ಮಹಿಳೆಯರು ಶಕ್ತಿಯುತ ಸಾಹಿತ್ಯಕಾರರಾಗಿ ತೀಕ್ಷ್ಣವಾಗಿ ಬರೆಯಬೇಕು ಎಂದು ಕರೆ ನೀಡಿದರು.

ಸಮ್ಮೇಳನದಲ್ಲಿ ಹಿರಿಯ ಸಾಹಿತಿ ಮಲ್ಲಮ್ಮ ಆರ್. ಪಾಟೀಲ್ ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ. ಸಿ. ಸೋಮಶೇಖರ್ ‘ಧನ್ಯಜೀವನ’ ಗ್ರಂಥ ಬಿಡುಗಡೆ ಮಾಡಿದರು. ಕಸಾಪ ಜಿಲ್ಲಾಧ್ಯಕ್ಷ ಸುರೇಶ್ ಚನಶೆಟ್ಟಿ ಆಶಯನುಡಿ ನುಡಿದರು. ಕಸಾಪ ತಾಲೂಕಾಧ್ಯಕ್ಷ ನಾಗಭೂಷಣ ಮಾಮಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ನಾಡೋಜ ಡಾ. ಬಸವಲಿಂಗ ಪಟ್ಟದೇವರು ದಿವ್ಯ ಸಾನಿಧ್ಯ ವಹಿಸಿದ್ದರು. ಡಾ. ಶಿವಾನಂದ ಸ್ವಾಮಿ ದಿವ್ಯ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದೇವರು, ಸ್ವಾಗತ ಸಮಿತಿ ಅಧ್ಯಕ್ಷೆ ಡಾ. ಗೀತಾ ಈಶ್ವರ್ ಖಂಡ್ರೆ ಸೇರಿದಂತೆ ಸಾಹಿತಿಗಳು, ಗಣ್ಯರು ಹಾಗೂ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದೇವರು, ಸ್ವಾಗತ ಸಮಿತಿಯ ಅಧ್ಯಕ್ಷೆ ಡಾ. ಗೀತಾ ಈಶ್ವರ್‌ ಖಂಡ್ರೆ, ಚಂದ್ರಕಾಂತ್ ಗಂಗಶೆಟ್ಟಿ, ಸೋಮಶೇಖರ್ ಬಿರಾದಾರ್ ಚಿದ್ರಿ, ಶಕುಂತಲಾ ಬೆಲ್ದಾಳೆ, ಡಾ. ಗೌರಮ್ಮ ಸಿದ್ದಾರೆಡ್ಡಿ, ಡಾ. ವಿಜಯಕುಮಾರ್ ಪಾಟೀಲ್, ಪ್ರೊ. ಓಂಪ್ರಕಾಶ್ ಧಡ್ಡೆ, ಶಿವಕುಮಾರ್ ಕೋಸಮ್, ಡಾ. ಪ್ರಭು.ಎಸ್, ಶಿವಶಂಕರ್ ಬಾಮಂಡಿ, ಬಸವರಾಜ್ ದನ್ನೂರ್, ಡಾ. ವಿದ್ಯಾವತಿ ಬಲ್ಲೂರ್, ಸುನಿತಾ ದಾಡಗೆ, ಪ್ರೊ. ಮಂಗಲಾ ಪಾಟೀಲ್, ರಮೇಶ್ ಚಿದ್ರಿ, ಕಾಶಿನಾಥ್ ಲದ್ದೆ, ಅಶೋಕ್ ಬಾವುಗೆ, ಮಲ್ಲಿಕಾರ್ಜುನ್ ಕುಂಚಗೆ, ಸಂತೋಷ್ ಬಿ.ಜಿ‌ ಪಾಟೀಲ್, ಮಲ್ಲಿಕಾರ್ಜನ್ ಹಲಮಂಡಗೆ ಉಪಸ್ಥಿತರಿದ್ದರು. ನಾಗಭೂಷಣ ಮಾಮಡಿ ಸ್ವಾಗತಿಸಿದರು. ದೀಪಕ್ ಥಮಕೆ ನಿರೂಪಿಸಿದರು. ಸಂತೋಷ್ ಪಾಟೀಲ್ ವಂದಿಸಿದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News