ಗುರುಗಂಗಾ ನದಿ ಸಂರಕ್ಷಣೆಗೆ ಎಲ್ಲರ ಸಹಕಾರ ಅವಶ್ಯ : ಮಾಜಿ ಸಚಿವ ರಾಜಶೇಖರ್ ಪಾಟೀಲ್

Update: 2026-08-09 19:39 IST

ಹುಮನಾಬಾದ್ : ಮಾಣಿಕ ನಗರದ ಐತಿಹಾಸಿಕ ಗುರುಗಂಗಾ ನದಿ ಉಳಿವಿಗಾಗಿ ಎಲ್ಲರೂ ಒಗ್ಗೂಡಿ ಸಹಕಾರ ನೀಡುವುದು ಅತ್ಯಗತ್ಯ ಎಂದು ಮಾಜಿ ಸಚಿವ ರಾಜಶೇಖರ್ ಪಾಟೀಲ್ ಅವರು ಕರೆ ನೀಡಿದರು.

ತಾಲೂಕಿನ ಮಾಣಿಕ ನಗರದ ಮಾಣಿಕ್ಯ ಸೌಧದಲ್ಲಿ ರವಿವಾರ ಮಾಣಿಕಪ್ರಭು ಸಂಸ್ಥಾನದ ಕಾರ್ಯದರ್ಶಿ ಆನಂದರಾಜ್ ಪ್ರಭು ಅವರ ಸಾನಿಧ್ಯದಲ್ಲಿ ಆಯೋಜಿಸಲಾಗಿದ್ದ 'ಗುರುಗಂಗಾ ಉಳಿಸಿ' ಚಿಂತನಾ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಕೈಗಾರಿಕಾ ಪ್ರದೇಶದ ಕಾರ್ಖಾನೆಗಳಿಂದ ರಾಸಾಯನಿಕ ಮಿಶ್ರಿತ ತ್ಯಾಜ್ಯವನ್ನು ಹಳ್ಳಕ್ಕೆ ಬಿಡಲಾಗುತ್ತಿದೆ. ಇದರ ಪರಿಣಾಮವಾಗಿ ಹುಮನಾಬಾದ್ ಪಟ್ಟಣ, ಗಡವಂತಿ, ಮಾಣಿಕ ನಗರ, ಧುಮ್ಮನಸೂರ್, ಮೊಳಕೇರಾ ಹಾಗೂ ಬಸಂತಪುರ್ ಸೇರಿದಂತೆ ಸುತ್ತಮುತ್ತಲಿನ ಅನೇಕ ಗ್ರಾಮಗಳ ಜನರು ಹಾಗೂ ಜಾನುವಾರುಗಳು ತೀವ್ರ ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಕ್ಷೇತ್ರದ ಜನರ ಹಿತದೃಷ್ಟಿಯಿಂದ ಹಾಗೂ ಕಾರ್ಖಾನೆಗಳಿಂದ ಆಗುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಆನಂದರಾಜ್ ಪ್ರಭು ಮತ್ತು ಚೈತನ್ಯರಾಜ್ ಪ್ರಭು ಅವರು ಮುಂದಾಗಿದ್ದು, ಇದಕ್ಕೆ ಎಲ್ಲರೂ ಕೈಜೋಡಿಸಬೇಕು. ಮಾಜಿ ಸಚಿವ ಎನ್ನುವ ಪದವಿಯನ್ನು ಬದಿಗಿಟ್ಟು, ಓರ್ವ ಸಾಮಾನ್ಯ ಪ್ರಜೆಯಾಗಿ ಈ ಹೋರಾಟಕ್ಕೆ ನಾನು ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ಅವರು ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ್ ಅವರು ಮಾತನಾಡಿ, ಕೈಗಾರಿಕಾ ಪ್ರದೇಶದ ಕಾರ್ಖಾನೆಗಳ ಮಾಲಿನ್ಯದಿಂದಾಗಿ ಈ ಭಾಗದ ಜನರ ಆರೋಗ್ಯದ ಮೇಲೆ ಭಾರಿ ದುಷ್ಪರಿಣಾಮ ಉಂಟಾಗುತ್ತಿದೆ. ಈ ಸಮಸ್ಯೆಯು ಜನರ ನೆಮ್ಮದಿ ಕೆಡಿಸಿದ್ದು, ಗಂಭೀರ ಸ್ವರೂಪ ಪಡೆದುಕೊಂಡಿದೆ. ಇದನ್ನು ಬಗೆಹರಿಸಲು ಹಾಗೂ ಶಾಶ್ವತ ಪರಿಹಾರ ಕಂಡುಕೊಳ್ಳಲು ನಾವೆಲ್ಲರೂ ಒಗ್ಗೂಡಿ ಹೋರಾಟ ಮಾಡಬೇಕು ಎಂದರು.

ಈ ಚಿಂತನಾ ಸಭೆಯಲ್ಲಿ ಮಾಣಿಕ ಪ್ರಭು ಸಂಸ್ಥಾನದ ಕಾರ್ಯದರ್ಶಿ ಆನಂದರಾಜ್ ಪ್ರಭು, ಸಹ ಕಾರ್ಯದರ್ಶಿ ಚೈತನ್ಯರಾಜ್ ಪ್ರಭು, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ್ ಪಾಟೀಲ್, ಪ್ರಮುಖರಾದ ಅಫ್ಸರ್ ಮಿಯ್ಯಾ, ಓಂಕಾರ್ ತುಂಬಾ ಹಾಗೂ ಉಮೇಶ್ ಜಮಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News