ಪೊಲೀಸರ ಭದ್ರತೆಯಲ್ಲಿ ಹುಲಸೂರು ಗ್ರಾಪಂ ಸಾಮಾನ್ಯ ಸಭೆ
ಮೂಲಸೌಕರ್ಯಗಳ ನಿರ್ಲಕ್ಷ್ಯಕ್ಕೆ ಸದಸ್ಯರ ಕಿಡಿ; ಪಿಡಿಒ ವಿರುದ್ಧ ಅಸಮಾಧಾನ
ಹುಲಸೂರು: ವಿವಿಧ ಮೂಲಸೌಕರ್ಯ ಸಮಸ್ಯೆಗಳು ಹಾಗೂ ಪಂಚಾಯಿತಿ ಆಡಳಿತಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯುವ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಹುಲಸೂರು ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆ ಮಂಗಳವಾರ ಪೊಲೀಸರ ಬಂದೋಬಸ್ತ್‌ನಲ್ಲಿ ನಡೆಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೀಪಾರಾಣಿ ಬೋಸ್ಲೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಮೀರಾಬಾಯಿ ಗಾಯಕವಾಡ್ ಹಾಗೂ ಪಿಡಿಒ ವಿನಯಕುಮಾರ್ ಉಪಸ್ಥಿತರಿದ್ದರು. ಸಭೆಯಲ್ಲಿ ಕುಡಿಯುವ ನೀರು, ಚರಂಡಿ, ಬೀದಿ ದೀಪ, ವಿಕಲಚೇತನರ ಭವನ, 15ನೇ ಹಣಕಾಸು ನಿಧಿ, ರಸ್ತೆ ದುರಸ್ತಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಸದಸ್ಯರು ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡರು.
ವಾರ್ಡ್ 6ರಲ್ಲಿ ಕಳೆದ ಐದು ತಿಂಗಳಿಂದ ಶುದ್ಧ ಕುಡಿಯುವ ನೀರಿನ ಘಟಕದ ಸಮಸ್ಯೆ ಬಗೆಹರಿದಿಲ್ಲ. ಇದರಿಂದ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದು, ಕೂಡಲೇ ಸಮಸ್ಯೆ ಪರಿಹರಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು. ಪಂಚಾಯಿತಿಯ ಬಿಲ್ ಕಲೆಕ್ಟರ್ ನಿವೃತ್ತರಾಗಿರುವುದರಿಂದ ಹುದ್ದೆ ಖಾಲಿಯಾಗಿದೆ. ಹುದ್ದೆ ಭರ್ತಿಗೆ ಮೇಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಆಗ್ರಹಿಸಿದರು.
ಎಲ್ಲ ವಾರ್ಡ್‌ಗಳಲ್ಲೂ ಬೀದಿ ದೀಪಗಳ ಬಲ್ಬ್‌ಗಳ ಕೊರತೆಯಿದ್ದು, ಸುಮಾರು 800 ಬಲ್ಬ್‌ಗಳ ಅಗತ್ಯವಿದೆ. 15ನೇ ಹಣಕಾಸು ನಿಧಿಯಡಿ ಬಲ್ಬ್‌ಗಳನ್ನು ಖರೀದಿಸಿ ಅಳವಡಿಸುವುದರ ಜತೆಗೆ ಬಿಲ್ ಪಾವತಿಗೂ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಹೇಳಿದರು.
ದಾಖಲೆ ನೀಡದಿರುವುದಕ್ಕೆ ಆಕ್ಷೇಪ :
15ನೇ ಹಣಕಾಸು ನಿಧಿಗೆ ಸಂಬಂಧಿಸಿದ ದಾಖಲೆಗಳನ್ನು ಸದಸ್ಯರು ಕೇಳಿದಾಗ ಸಮರ್ಪಕ ಮಾಹಿತಿ ನೀಡಿಲ್ಲ ಎಂದು ಆಕ್ಷೇಪ ವ್ಯಕ್ತವಾಯಿತು. ಈ ವಿಚಾರದಲ್ಲಿ ಸದಸ್ಯರು ಹಾಗೂ ಪಿಡಿಒ ನಡುವೆ ಮಾತಿನ ಚಕಮಕಿ ನಡೆಯಿತು. ಪಂಚಾಯಿತಿಯ ಹಣಕಾಸು ವ್ಯವಹಾರಗಳು ಹಾಗೂ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸದಸ್ಯರಿಗೆ ಒದಗಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.
ವಾರ್ಡ್‌ಗಳಲ್ಲಿ ಚರಂಡಿ ಹಾಗೂ ಕುಡಿಯುವ ನೀರಿನ ಸಮಸ್ಯೆಗಳನ್ನು ಸದಸ್ಯರು ಪ್ರಸ್ತಾಪಿಸಿದಾಗ, ಅನುದಾನದ ಕೊರತೆಯಿದೆ ಎಂದು ಪಿಡಿಒ ಉತ್ತರಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು, ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಅನುದಾನಕ್ಕಾಗಿ ಮೇಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಆಗ್ರಹಿಸಿದರು.
ಕಳಪೆ ಕಾಮಗಾರಿ ಆರೋಪ :
ಜೆಜೆಎಂ ಯೋಜನೆಯಡಿ ನಡೆದ ಕೆಲವು ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ರಸ್ತೆಗಳು ಹಾಳಾಗಿದ್ದು, ರಸ್ತೆ ದುರಸ್ತಿಗೆ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆಯಬೇಕು. ಕಳಪೆ ಕಾಮಗಾರಿಗಳ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು.