×
Ad

ಬೀದರ್‌ | ವಿದ್ಯುತ್ ಸ್ಪರ್ಶಿಸಿ ದಿನಗೂಲಿ ಕಾರ್ಮಿಕ ಮೃತ್ಯು : ಜೆಇ, ಲೈನ್‌ಮ್ಯಾನ್ ವಿರುದ್ಧ ಪ್ರಕರಣ ದಾಖಲು

Update: 2026-07-03 20:09 IST

ಸಾಂದರ್ಭಿಕ ಚಿತ್ರ | Image by vectorpouch on Magnific

ಔರಾದ್: ವಿದ್ಯುತ್ ಮೀಟರ್ ದುರಸ್ತಿ ಕಾರ್ಯ ನಿರ್ವಹಿಸುವ ವೇಳೆ ವಿದ್ಯುತ್ ಸ್ಪರ್ಶಿಸಿ ದಿನಗೂಲಿ ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ತಾಲೂಕಿನ ಭಂಡಾರಕುಮಟಾ ಗ್ರಾಮದಲ್ಲಿ ಗುರುವಾರ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಜೆಸ್ಕಾಂ ಇಲಾಖೆಯ ಜೆಇ ಹಾಗೂ ಲೈನ್‌ಮ್ಯಾನ್ ವಿರುದ್ಧ ನಿರ್ಲಕ್ಷ್ಯದ ಆರೋಪದಡಿ ಹೋಕ್ರಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲೂಕಿನ ಖೇರ್ಡಾ ಗ್ರಾಮದ ಅನಿಲ್ ಕಾಂಬಳೆ (23) ಮೃತ‌ ಕಾರ್ಮಿಕನಾಗಿದ್ದಾನೆ. ಈತ ಜೆಸ್ಕಾಂ ಇಲಾಖೆಯ ಜೆಇ ದಿನೇಶ್ ಹಾಗೂ ಲೈನ್‌ಮ್ಯಾನ್ ಆಸೀಫ್ ಅವರ ಬಳಿ ದಿನಗೂಲಿ ಆಧಾರದ ಮೇಲೆ ವಿದ್ಯುತ್ ಕಾಮಗಾರಿಗಳಲ್ಲಿ ಕೆಲಸ ಮಾಡುತ್ತಿದ್ದನು. ಗುರುವಾರ ಗ್ರಾಮದ ಮನೆಯೊಂದರಲ್ಲಿ ವಿದ್ಯುತ್ ಮೀಟರ್ ದುರಸ್ತಿ ಮಾಡುವಂತೆ ಜೆಇ ಹಾಗೂ ಲೈನ್‌ಮ್ಯಾನ್ ಸೂಚನೆ ನೀಡಿದ್ದರು. ಅದರಂತೆ ಕೆಲಸ ನಿರ್ವಹಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಗಲಿ ಅನಿಲ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಅಧಿಕೃತ ಸಿಬ್ಬಂದಿಯಲ್ಲದ ದಿನಗೂಲಿ ಕಾರ್ಮಿಕನಿಂದ ವಿದ್ಯುತ್ ಕಾಮಗಾರಿ ಮಾಡಿಸಿರುವುದೇ ದುರಂತಕ್ಕೆ ಕಾರಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಅಪಾಯಕಾರಿ ಕೆಲಸಕ್ಕೆ ಕಳುಹಿಸಿದ್ದರಿಂದ ಅಮಾಯಕ ಯುವಕನ ಜೀವ ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಹೋಕ್ರಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಕುಟುಂಬಸ್ಥರ ದೂರಿನ ಮೇರೆಗೆ ಜೆಇ ದಿನೇಶ್ ಹಾಗೂ ಲೈನ್‌ಮ್ಯಾನ್ ಆಸೀಫ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಈ ಘಟನೆ ಗ್ರಾಮದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ವಿದ್ಯುತ್ ಕಾಮಗಾರಿಗಳಲ್ಲಿ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿ ಬಂದಿದೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News