ಬೀದರ್ | ನಾಗಮಾರಪಳ್ಳಿ ಆರೋಗ್ಯ ಉಪ ಕೇಂದ್ರದಲ್ಲಿ ಮೂಲಭೂತ ಸೌಲಭ್ಯ ಕೊರತೆ : ಸಾರ್ವಜನಿಕರ ಪರದಾಟ
ಬೀದರ್ : ಔರಾದ್ (ಬಿ) ತಾಲೂಕಿನ ಚಿಂತಾಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ನಾಗಮಾರಪಳ್ಳಿ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಉಪ ಕೇಂದ್ರದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಹಾಗೂ ಇನ್ನಿತರ ಸಮಸ್ಯೆಗಳಿರುವುದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.
ನಾಗಮಾರಪಳ್ಳಿ ಗ್ರಾಮದಲ್ಲಿ ಸುಸಜ್ಜಿತವಾದ ಆರೋಗ್ಯ ಉಪ ಕೇಂದ್ರದ ಕಟ್ಟಡವು 2024ರಲ್ಲಿ ಉದ್ಘಾಟನೆ ಮಾಡಲಾಗಿದೆ ಎನ್ನುವ ಮಾಹಿತಿ ಇದೆ. ಆದರೆ, ಯಾವ ಯೋಜನೆಯಲ್ಲಿ, ಎಷ್ಟು ವೆಚ್ಚದಲ್ಲಿ ಕಟ್ಟಡ ಕಟ್ಟಲಾಗಿದೆ ಎನ್ನುವ ಮಾಹಿತಿಯ ಫಲಕ ಹಾಕಲಿಲ್ಲ. ಆ ಕಟ್ಟಡದ ಉದ್ಘಾಟನೆಯಾಗಿ ಒಂದುವರೆ ವರ್ಷ ಮಾತ್ರ ಕಳೆದಿದ್ದು, ಒಂದೇ ವರ್ಷದ ಅವಧಿಯಲ್ಲಿ ಆರೋಗ್ಯ ಉಪ ಕೇಂದ್ರ ಕಟ್ಟಡವು ಸಂಪೂರ್ಣವಾಗಿ ಪಾಳು ಬಿದ್ದಂತಾಗಿದೆ. ಹೆಸರಿಗೆ ಮಾತ್ರ ಈ ಆರೋಗ್ಯ ಉಪಕೇಂದ್ರ ಕಟ್ಟಿದಂತೆ ಕಾಣುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಆರೋಗ್ಯ ಉಪ ಕೇಂದ್ರಕ್ಕೆ ನಾಗಮಾರಪಳ್ಳಿ, ಮಾನುರ್, ನಂದ್ಯಾಳ್, ಜಕನಾಳ್ ಹಾಗೂ ಇಡಿಗ್ಯಾಳ್ ಐದು ಗ್ರಾಮಗಳು ಸೇರಿವೆ. ಈ ಐದು ಗ್ರಾಮಗಳ ಜನರು ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಗಾಗಿ ಇದೇ ಆರೋಗ್ಯ ಉಪ ಕೇಂದ್ರಕ್ಕೆ ಬರುತ್ತಾರೆ. ಆದರೆ, ಈ ಕಟ್ಟಡದಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ಮಳೆ ಬಂದರೆ ಈ ಕಟ್ಟಡದ ಕೆಲ ಕೋಣೆಗಳಲ್ಲಿ ಮಳೆ ನೀರು ನಿಲ್ಲುತ್ತವೆ. ಕಟ್ಟಡದ ಸುತ್ತಲೂ ಗಿಡಗಳು, ಹುಲ್ಲು ಬೆಳೆದು ನಿಂತಿದೆ. ಕಿಟಕಿಯ ಗಾಜುಗಳು ಒಡೆದಿದ್ದು, ಹೊರಗಡೆಯಿಂದ ಗಿಡಗಳು ಕಿಟಕಿಯ ಒಳಗಡೆ ನುಗ್ಗುತ್ತಿವೆ. ಆ ಗಿಡಗಳ ಮೂಲಕ ಹಾವು, ಚೇಳು ಸೇರಿದಂತೆ ಅನೇಕ ರೀತಿಯ ಹುಳಗಳು ಒಳನುಗ್ಗಿ ಸಾರ್ವಜನಿಕರಿಗೆ ಹಾಗೂ ಅಲ್ಲಿರುವ ಸಿಬ್ಬಂದಿಗೆ ಕಚ್ಚಿ ಅಪಾಯವಾಗುವ ಸಂಭವವಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ರೋಗಿಗಳಿಗೆ ಬೆಡ್, ಕುಡಿಯುವ ನೀರಿಲ್ಲ : ಈ ಆರೋಗ್ಯ ಉಪಕೇಂದ್ರದಲ್ಲಿ ರೋಗಿಗಳು ಬಂದರೆ ಅವರಿಗೆ ಚಿಕಿತ್ಸೆ ನೀಡುವುದಕ್ಕಾಗಿ ಬೇಡ್‌ಗಳ ವ್ಯವಸ್ಥೆ ಇಲ್ಲದಾಗಿದೆ. ಯಾವುದೇ ರೋಗಿಗಳು ಬಂದರೂ ಕೂಡ ನೆಲದ ಮೇಲೆ ಮಲಗಿ ಅಥವಾ ಕುರ್ಚಿ ಮೇಲೆ ಕುಳಿತುಕೊಂಡೇ ಚಿಕಿತ್ಸೆ ಪಡೆಯಬೇಕಾಗಿದೆ. ಒಂದು ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬಂದರೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಕೂಡ ಇಲ್ಲದಾಗಿದೆ. ಹಾಗೆಯೇ ಆರೋಗ್ಯ ಕೇಂದ್ರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕೂಡ ಇಲ್ಲದಾಗಿದ್ದು, ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗಬ್ಬೆದ್ದು ನಾರುತ್ತಿರುವ ಶೌಚಾಲಯ, ವಿದ್ಯುತ್ ಸಮಸ್ಯೆ : ಈ ಆರೋಗ್ಯ ಉಪಕೇಂದ್ರದ ಕಟ್ಟಡದಲ್ಲಿ ಶೌಚಾಲಯದ ವ್ಯವಸ್ಥೆ ಇದ್ದರೂ ಕೂಡ ಗಬ್ಬೆದ್ದು ನಾರುತ್ತಿದೆ. ಆ ಶೌಚಾಲಯಕ್ಕೆ ಬಾಗಿಲು ಇಲ್ಲ. ಇದರಿಂದಾಗಿ ರೋಗಿಗಳಿಗೆ ಮತ್ತು ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಈ ಕಟ್ಟಡದಲ್ಲಿ ಸರಿಯಾದ ವಿದ್ಯುತ್ ವ್ಯವಸ್ಥೆ ಕೂಡ ಇಲ್ಲ. ಕತ್ತಲಲ್ಲೇ ದಿನ ದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಯೋಗ ಕೇಂದ್ರ ಇದ್ದರೂ ಉಪಯೋಗವಿಲ್ಲ : ಈ ಆರೋಗ್ಯ ಉಪ ಕೇಂದ್ರದ ಗೇಟ್ ಮುರಿದು ಬಿದ್ದಿದ್ದು, ಯಾರು ಕೂಡ ಕಟ್ಟಡದ ಆವರಣದಲ್ಲಿ ಬರಬಹುದಾಗಿದೆ. ಕಟ್ಟ ಆವರಣದ ಒಂದು ಬದಿಯಲ್ಲಿ ಯೋಗ ಮಾಡುವುದಕ್ಕಾಗಿ ಯೋಗ ಕೇಂದ್ರದ ಶೆಡ್ ನಿರ್ಮಾಣ ಮಾಡಲಾಗಿದೆ. ಆದರೆ, ಆ ಯೋಗ ಮಾಡುವ ಕಟ್ಟಡದ ಸುತ್ತ ಹುಲ್ಲು, ಗಿಡಗಳು ಬೆಳೆದಿದ್ದು ಅದರಲ್ಲಿ ಪ್ರವೇಶ ಮಾಡುವುದಕ್ಕೂ ಕೂಡ ಬರುವುದಿಲ್ಲ. ಯೋಗ ಮಾಡುವ ಸ್ಥಳದಲ್ಲಿ ನಾಯಿಗಳು ಬಂದು ಗಲೀಜು ಮಾಡಿವೆ. ಆಸ್ಪತ್ರೆ ಕಟ್ಟಡದ ಜೊತೆ ಜೊತೆಗೆ ಯೋಗ ಕೇಂದ್ರವೂ ಕೂಡ ಸಂಪೂರ್ಣವಾಗಿ ಹಾಳಾಗಿದೆ.
ಸಿಬ್ಬಂದಿ, ಔಷಧಿಗಳ ಕೊರತೆ ಆರೋಪ : ಈ ಆರೋಗ್ಯ ಉಪಕೇಂದ್ರದಲ್ಲಿ ಇಬ್ಬರು ಸಿಬ್ಬಂದಿ (ಸಿಸ್ಟರ್)ಗಳಿದ್ದು, ಅವರು ವಾರದಲ್ಲಿ 2 ರಿಂದ 3 ಸಲ ಅಷ್ಟೇ ಬರುತ್ತಾರೆ. ಹಾಗೆಯೇ ಇಲ್ಲಿ ಯಾವುದೇ ರೀತಿಯ ಔಷಧಿಗಳ ಲಭ್ಯತೆ ಇಲ್ಲ. ಆದ್ದರಿಂದ, ರೋಗಿಗಳು ಚಿಕಿತ್ಸೆಗಾಗಿ ಈ ಆರೋಗ್ಯ ಉಪಕೇಂದ್ರಕ್ಕೆ ಬರುವುದಕ್ಕೆ ಹಿಂಜರಿಯುತ್ತಿದ್ದಾರೆ. ಬಹುತೇಕ ಎಲ್ಲ ರೋಗಿಗಳು ಚಿಕಿತ್ಸೆಗಾಗಿ ತಾಲೂಕು ಕೇಂದ್ರವಾದ ಔರಾದ್ ಪಟ್ಟಣಕ್ಕೆ ತೆರಳುತ್ತಾರೆ ಎಂದು ಸ್ಥಳಿಯರು ತಿಳಿಸಿದ್ದಾರೆ.
ಈ ಆರೋಗ್ಯ ಉಪ ಕೇಂದ್ರವು ಸಮಸ್ಯೆಗಳ ಗೂಡಾಗಿದ್ದು, ಇಲ್ಲಿ ಸರಿಯಾದ ಚಿಕಿತ್ಸೆ ಸಿಗದ ಕಾರಣ ಗರ್ಭಿಣಿಯರು, ಹಿರಿಯ ನಾಗರಿಕರು, ಮಕ್ಕಳು ಹಾಗೂ ಸಾಮಾನ್ಯ ರೋಗಿಗಳು ಉತ್ತಮ ಆರೋಗ್ಯ ಸೇವೆಯಿಂದ ವಂಚಿತರಾಗುತ್ತಿದ್ದಾರೆ. ಇಲ್ಲಿನ ಸ್ವಚ್ಛತೆ ಬಗ್ಗೆ 2025ರಲ್ಲಿ ಗ್ರಾಮ ಪಂಚಾಯತ್ ಗೆ ಆರೋಗ್ಯ ಇಲಾಖೆಯಿಂದ ಮನವಿ ಸಲ್ಲಿಸಿದರು ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ಆರೋಗ್ಯ ಉಪಕೇಂದ್ರದಲ್ಲಿ ಅಗತ್ಯವಿರುವ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಶೀಘ್ರವಾಗಿ ಒದಗಿಸಿ, ಗುಣಮಟ್ಟದ ಆರೋಗ್ಯ ಸೇವೆ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.
ನಾಗಮಾರಪಳ್ಳಿ ಆರೋಗ್ಯ ಉಪ ಕೇಂದ್ರದಲ್ಲಿ ವಿದ್ಯುತ್, ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಛತೆ, ಬೇಡ್, ಶೌಚಾಲಯ ಸೇರಿದಂತೆ ಹಲವಾರು ಸಮಸ್ಯೆಗಳಿವೆ. ಜೊತೆಗೆ ಸಿಬ್ಬಂದಿಗಳ ಕೊರತೆ ಇದೆ. ಇಬ್ಬರು ಸಿಬ್ಬಂದಿ (ಸಿಸ್ಟರ್) ಗಳಿದ್ದು, ಅವರು ಕೂಡ ವಾರದಲ್ಲಿ 2-3 ಸಲ ಮಾತ್ರ ಬರುತ್ತಾರೆ. ಇಲ್ಲಿ ಯಾವುದೇ ರೀತಿಯ ಸೌಲಭ್ಯ ಇಲ್ಲದ ಕಾರಣ ರೋಗಿಗಳು ಈ ಆರೋಗ್ಯ ಕೇಂದ್ರಕ್ಕೆ ಬರುವುದೇ ಇಲ್ಲ. ಬಂದರೂ ಇಲ್ಲಿ ಚಿಕಿತ್ಸೆ ಸಿಗುವುದಿಲ್ಲ. ಇಲ್ಲಿ ಎಲ್ಲ ಸೌಲಭ್ಯಗಳು ಒದಗಿಸಿದರೆ ಸಣ್ಣಪುಟ್ಟ ಕಾಯಿಲೆಗಳಿಗೆ ಸ್ಥಳಿಯವಾಗಿ ಚಿಕಿತ್ಸೆ ಪಡೆಯಬಹುದು ಎಂದು ಸ್ಥಳೀಯ ನಿವಾಸಿ ಧನರಾಜ್ ಕಾಂಬಳೆ ಹೇಳಿದ್ದಾರೆ.
ಇಂಥವುಗಳ ಬಗ್ಗೆ ನಮ್ಮ ಗಮನಕ್ಕೆ ಬಂದಾಗ ಮಾತ್ರ ನಾವು ಏನಾದರೂ ಮಾಡಬಹುದು. ಈ ಆರೋಗ್ಯ ಉಪ ಕೇಂದ್ರದ ಬಗ್ಗೆ ನಾನು ಪರಿಶೀಲನೆ ಮಾಡುತ್ತೇನೆ. ಅಲ್ಲಿಗೆ ಭೇಟಿ ನೀಡಿ, ಸ್ಥಳಿಯ ಅಧಿಕಾರಿ ಜೊತೆಗೆ ಮಾತನಾಡಿ ವರದಿ ತಯಾರಿಸುತ್ತೇನೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ಅನಿಲ್ ಏಕಲೂರೆ ಹೇಳಿದ್ದಾರೆ.