ಬೀದರ್ | ಬಿಎಲ್‌ಓ ತಮ್ಮ ಮನೆಗೆ ಭೇಟಿ ನೀಡಿದಾಗ ಸಾರ್ವಜನಿಕರು ಸಹಕರಿಸಬೇಕು : ಡಿಸಿ ಶಿಲ್ಪಾ ಶರ್ಮಾ
ಬೀದರ್ : ಭಾರತ ಚುನಾವಣಾ ಆಯೋಗ ಮತ್ತು ಬೆಂಗಳೂರಿನ ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)-2026ರ ಅಂಗವಾಗಿ ಜಿಲ್ಲಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗಾಗಿ ಬಿಎಲ್‌ಓ ತಮ್ಮ ಮನೆಗೆ ಭೇಟಿ ನೀಡಿದಾಗ ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾ ಶಿರ್ಮಾ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)ಯ ವೇಳಾಪಟ್ಟಿಯಂತೆ 2026ರ ಜೂ.30 ರಿಂದ ಜು.29ರ ವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್ಓ) ತಮ್ಮ ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಯಲ್ಲಿ ನೊಂದಾಯಿಸಿಕೊಂಡಿರುವ ಮತದಾರರಿಗೆ ಎನ್ಯುಮೆರೆಷನ್ ಫಾರ್ಂ ನೀಡಲಾಗುವುದು. ಈ ಎನ್ಯುಮೆರೆಷನ್ ಫಾರ್ಂನಲ್ಲಿ ಮತದಾರರು ಮಾಹಿತಿಯನ್ನು ಭರ್ತಿಮಾಡಿ ಹಾಗೂ ಬಿಎಲ್ಓ ಅವರು ಮನೆಗೆ ಭೇಟಿ ನೀಡಿದಾಗ, ಮತದಾರರು ಮನೆಯಲ್ಲಿ ಇಲ್ಲದಿದ್ದರೆ ಬಿಎಲ್ಓ ಅವರು 3 ಬಾರಿ ಮತದಾರರ ಮನೆಗೆ ಭೇಟಿ ನೀಡುವರು. ಅಂತಹ ಪಕ್ಷದಲ್ಲಿಯು ಮತದಾರರು ಇಲ್ಲದಿರುವಾಗ ಮಹಜರ ಮಾಡಿಕೊಳ್ಳುವರು ಎಂದು ಅವರು ಮಾಹಿತಿ ನೀಡಿದ್ದಾರೆ.
ಬಿಎಲ್ಓ ಅವರು ತಮ್ಮ ಮನೆಗೆ ಭೇಟಿ ನೀಡಿರುವ ಸಮಯದಲ್ಲಿ ತಾವು ಸಹಕರಿಸಿ, ವಿತರಿಸಲಾಗುವ ಎನ್ಯುಮೆರೆಷನ್ ಫಾರ್ಂನಲ್ಲಿ ತಮ್ಮ ಮಾಹಿತಿಯನ್ನು ಭರ್ತಿಮಾಡಿ ನಿಗದಿತ ಸ್ಥಳದಲ್ಲಿ ಸಹಿಮಾಡಿ, ಪುನಃ ಸಂಬಂಧಪಟ್ಟ ಬಿಎಲ್ಓ ಅವರಿಗೆ ಹಿಂದಿರುಗಿಸಬೇಕು. ಹಾಗೆಯೇ ಬೇರೆ ಕಡೆಯಿಂದ ವಲಸೇ ಬಂದಿರುವ ಮತದಾರರು ಅಥವಾ ಮದುವೆ ಮಾಡಿಕೊಂಡು ಬಂದಿರುವ ಮತದಾರರು ತಮ್ಮ ತಂದೆ ಅಥವಾ ತಾಯಿಯ 2002ರ ಮತದಾರರ ಪಟ್ಟಿಯಲ್ಲಿ ನೊಂದಾಯಿಸಿರುವ ಮಾಹಿತಿಯನ್ನು ಬಿಎಲ್ಓ ಅವರಿಗೆ ಒದಗಿಸಿ ಸ್ವೀಕೃತಿಯನ್ನು ಪಡೆಯಬೇಕು ಎಂದು ಅವರು ತಿಳಿಸಿದ್ದಾರೆ.