ಬೀದರ್ | ಕನ್ನಡ ರಾಜ್ಯೋತ್ಸವ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಲು ಡಿಸಿ ಶಿಲ್ಪಾ ಶರ್ಮಾ ಸೂಚನೆ
ಬೀದರ್ : ಜಿಲ್ಲೆಯಲ್ಲಿ ನ.1 ರಂದು ಕನ್ನಡ ರಾಜ್ಯೋತ್ಸವ ದಿನಾಚರಣೆಯು ಅರ್ಥಪೂರ್ಣವಾಗಿ ಹಾಗೂ ಆಕರ್ಷಕವಾಗಿ ಆಚರಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನ.1 ರ ಕನ್ನಡ ರಾಜ್ಯೋತ್ಸವ ಆಚರಣೆ ಕುರಿತು ನಡೆದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಯಾವುದೇ ಲೋಪಗಳಿಲ್ಲದಂತೆ ಆಚರಿಸಲು ವಿವಿಧ ಸಮಿತಿಗಳನ್ನು ರಚಿಸಲಾಗಿರುತ್ತದೆ. ಆಯಾ ಸಮಿತಿಗಳಿಗೆ ವಹಿಸಿದ ಕಾರ್ಯವನ್ನು ವಿಶೇಷ ಆಸಕ್ತಿಯಿಂದ ನಿರ್ವಹಿಸಬೇಕು. ಪ್ರತಿ ವರ್ಷದಂತೆ ಈ ವರ್ಷವು ಸಹ ಕನ್ನಡ ರಾಜ್ಯೋತ್ಸವದ ಹಿಂದಿನ ದಿನ ಸರ್ಕಾರಿ ಕಚೇರಿ ಹಾಗೂ ನಗರದ ವಿವಿಧ ವೃತ್ತಿಗಳಲ್ಲಿ ಸ್ವಚ್ಚತೆ, ವಿದ್ಯುತ್ ದೀಪಾಲಂಕಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.
ಅಂದು ಬೆಳಿಗ್ಗೆ 7:45 ಗಂಟೆಗೆ ಸರಕಾರಿ, ಅರೇ ಸರಕಾರಿ ಹಾಗೂ ಸಂಘ ಸಂಸ್ಥೆಗಳ ಕಟ್ಟಡಗಳ ಮೇಲೆ ಕಡ್ಡಾಯವಾಗಿ ರಾಷ್ಟ್ರ ಧ್ವಜಾರೋಹಣ ಮಾಡಿ ಎಲ್ಲಾ ಕಚೇರಿಯ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಎಲ್ಲಾ ಶಾಲಾ ಕಾಲೇಜು ಮಕ್ಕಳೊಂದಿಗೆ ಬೆಳಿಗ್ಗೆ 7:50ಕ್ಕೆ ಬಸವೇಶ್ವರ್ ವೃತ್ತದಲ್ಲಿ ಸೇರುವುದು. ನಂತರ ಬೆಳಿಗ್ಗೆ 8 ಗಂಟೆಗೆ ತಾಯಿ ಭುವನೇಶ್ವರಿ ಅವರ ಭಾವಚಿತ್ರದೊಂದಿಗೆ ಮೆರವಣಿಗೆ ಪ್ರಾರಂಭಿಸಲಾಗುವುದು. ಈ ಮೆರವಣಿಗೆಯು ನಗರದ ಭಗತಸಿಂಗ್ ವೃತ್ತ, ಅಂಬೇಡ್ಕರ್ ವೃತ್ತ, ಜನರಲ್ ಕರಿಯಪ್ಪ ವೃತ್ತದಿಂದ ನೇರವಾಗಿ ನಗರದ ನೆಹರು ಕ್ರೀಡಾಂಗಣ ಸೇರಲಿದೆ. ನಂತರ ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಧ್ವಜಾರೋಹಣ ಮಾಡಲಿದ್ದಾರೆ ಎಂದು ಹೇಳಿದರು.
ನೆಹರು ಕ್ರೀಡಾಂಗಣದಲ್ಲಿ ಪೊಲೀಸ್ ಇಲಾಖೆ ಹೋಮ್ ಗಾರ್ಡ್ ಹಾಗೂ ಇನ್ನಿತರ ಇಲಾಖೆಯ ವತಿಯಿಂದ ಪರೇಡ್ ನಡೆಸಲು ಕ್ರಮ ವಹಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ ಅವರು, ನಂತರ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದು. ವಿವಿಧ ರಂಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಪರಿಣಿತರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸುವ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.
ಅಂದು ಸಾಯಂಕಾಲ 5:30 ರಿಂದ ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ್ ಚನ್ನಶೆಟ್ಟಿ, ಜಗನ್ನಾಥ್ ಹೆಬ್ಬಾಳೆ, ಜನಪದ ಅಕಾಡೆಮಿಯ ಸದಸ್ಯ ವಿಜಯಕುಮಾರ ಸೋನಾರೆ, ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ್ ಅತಿವಾಳೆ, ವೀರುಪಾಕ್ಷ ಗಾದಗಿ ಹಾಗೂ ಇನ್ನಿತರರು ಸಭೆಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಹೆಚ್ಚುವರಿ ಪೊಲೀಸ್ ಉಪವರಿಷ್ಠಾಧಿಕಾರಿ ಚಂದ್ರಕಾಂತ್ ಪೂಜಾರ್, ಅಪರ ಜಿಲ್ಲಾಧಿಕಾರಿ ಶಿವಾನಂದ್ ಕರಾಳೆ ಹಾಗೂ ಡಿಡಿಪಿಯು ಚಂದ್ರಕಾಂತ್ ಶಾಬಾದಕರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿ, ಸಂಘ-ಸಂಸ್ಥೆ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.