ಬೀದರ್| ಬ್ರಿಮ್ಸ್ ನ ಡಾ.ಜಯಸಿಂಗ್ ವಿರುದ್ಧ ಕ್ರಮಕ್ಕೆ ನಮ್ಮ ಕರ್ನಾಟಕ ಸೇನೆ ಆಗ್ರಹ
ಬೀದರ್: ನಗರದ ಬ್ರಿಮ್ಸ್ ಆಸ್ಪತ್ರೆಯ ಟ್ಯೂಟರ್ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ.ಜಯಸಿಂಗ್ ಅವರು ಸರ್ಕಾರದ ನಿಯಮಾವಳಿಗಳಿಗೆ ವಿರುದ್ಧವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರನ್ನು ತಕ್ಷಣವೇ ಹುದ್ದೆಯಿಂದ ವಜಾಗೊಳಿಸಬೇಕು ಎಂದು ನಮ್ಮ ಕರ್ನಾಟಕ ಸೇನೆ ಆಗ್ರಹಿಸಿದೆ.
ಬ್ರಿಮ್ಸ್ ನಿರ್ದೇಶಕರ ಮೂಲಕ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಡಾ.ಜಯಸಿಂಗ್ ಅವರು 2018–19ನೇ ಸಾಲಿನೊಳಗಾಗಿ ಸ್ನಾತಕೋತ್ತರ ಪದವಿ ಪಡೆಯುವುದು ಕಡ್ಡಾಯವಾಗಿತ್ತು. ನಿಗದಿತ ಅವಧಿಯೊಳಗೆ ಸ್ನಾತಕೋತ್ತರ ಪದವಿ ಪಡೆಯದಿದ್ದಲ್ಲಿ ಸೇವೆಯಿಂದ ಬಿಡುಗಡೆಗೊಳಿಸುವ ಷರತ್ತಿನೊಂದಿಗೆ ಎಐಸಿಟಿಇ ವೇತನ ಶ್ರೇಣಿಯಲ್ಲಿ ನೇಮಕಾತಿ ನೀಡಲಾಗಿತ್ತು. ಆದರೆ ಅವರು ಇಂದಿನವರೆಗೂ ಸ್ನಾತಕೋತ್ತರ ಪದವಿ ಪಡೆದಿಲ್ಲ ಎಂದು ಆರೋಪಿಸಲಾಗಿದೆ.
ಅದಲ್ಲದೆ 19ನೇ ಆಡಳಿತ ಮಂಡಳಿಯ ನಿರ್ಧಾರದಂತೆ ಆಡಳಿತಾತ್ಮಕ ಕಚೇರಿಯಲ್ಲಿ ಯಾವುದೇ ಕಾರ್ಯ ನಿರ್ವಹಿಸುವಂತಿಲ್ಲ ಎಂಬ ನಿಯಮ ಇದ್ದರೂ ಕೂಡ ಅದನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ದೂರಲಾಗಿದ್ದು, ಸರ್ಕಾರದ ಆದೇಶಗಳನ್ನು ಪಾಲಿಸದೇ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ತಪ್ಪು ಮಾಹಿತಿ ನೀಡಿ ಕರ್ತವ್ಯ ಲೋಪ ಎಸಗುತ್ತಿದ್ದಾರೆ. ಈ ಕುರಿತು ಬ್ರಿಮ್ಸ್ ನಿರ್ದೇಶಕರು ಇದುವರೆಗೆ ಯಾವುದೇ ಶಿಸ್ತು ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ.
ಇದನ್ನೆಲ್ಲ ಪರಿಗಣಿಸಿ ತಕ್ಷಣವೇ ಡಾ. ಜಯಸಿಂಗ್ ಅವರನ್ನು ಕರ್ತವ್ಯದಿಂದ ವಜಾಗೊಳಿಸಬೇಕು. ನಮ್ಮ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಬ್ರಿಮ್ಸ್ ಎದುರುಗಡೆ ಸಾಂಕೇತಿಕ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಈ ಸಂದರ್ಭದಲ್ಲಿ ನಮ್ಮ ಕರ್ನಾಟಕ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಕೇತನ್ ಪಾಟೀಲ್, ಶಿವಕುಮಾರ್, ಶಾನವಾಜ್ ಹಾಗೂ ಪ್ರೇಮ್ ಕೋಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.