×
Ad

ಬಜೆಟ್ ನಲ್ಲಿ ಮಾನವ ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ 1,500 ಕೋಟಿ ರೂ.: ಸಚಿವ ಈಶ್ವರ್ ಖಂಡ್ರೆ ಸ್ವಾಗತ

Update: 2026-03-06 21:45 IST

ಬೀದರ್ : 2026-27ನೇ ಸಾಲಿನ ಬಜೆಟ್ ನಲ್ಲಿ ಮಾನವ ವನ್ಯಜೀವಿ ಸಂಘರ್ಷ ನಿಯಂತ್ರಿಸಲು 1,500 ಕೋಟಿ ರೂ. ಘೋಷಿಸಿದ್ದು, ಈ ವರ್ಷ 269 ಕೋಟಿ ಮೀಸಲಿಟ್ಟಿರುವುದನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಸ್ವಾಗತಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ದಾಖಲೆಯ 17ನೇ ಬಜೆಟ್ ಸರ್ವಸ್ಪರ್ಶಿಯಾಗಿದ್ದು, ಬಡವರ, ಮಧ್ಯಮವರ್ಗದವರ ಏಳಿಗೆಗೆ ಸಮರ್ಪಿತವಾಗಿದೆ. ಮಿಗಿಲ್ಗಿ ವನ್ಯಜೀವಿ ಮಾನವ ಸಂಘರ್ಷ ನಿಗ್ರಹಕ್ಕೆ ಒತ್ತು ನೀಡಿದೆ. ಇದರ ಜೊತೆಗೆ ಈಗಾಗಲೇ ಗ್ರೇಟರ್ ಹೆಸರುಘಟ್ಟ ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಿರುವ ಪ್ರದೇಶದ ಅಭಿವೃದ್ಧಿಗೆ ಕ್ರಮ ಕೈಗೊಂಡಿರುವುದು, ಬೆಂಗಳೂರು ಮಹಾನಗರದಲ್ಲಿ ಶ್ವಾಸತಾಣ ಸಂರಕ್ಷಣೆಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಚಿರತೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಹೊರವಲಯದ ಬನ್ನೇರುಘಟ್ಟದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಚಿರತೆ ಪುನರ್ವಸತಿ ಕೇಂದ್ರ ಸ್ಥಾಪಿಸುತ್ತಿರುವುದೂ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. 2026-27ರ ಸಾಲಿನಲ್ಲಿ ಅರಣ್ಯ ಇಲಾಖೆಯ ವಿವಿಧ ವೃಂದದಲ್ಲಿ ಖಾಲಿ ಇರುವ ಸುಮಾರು 2 ಸಾವಿರ ಹುದ್ದೆಗಳ ಭರ್ತಿ ಮಾಡಲಾಗುತ್ತಿದ್ದು, ಇದು ಕೂಡ ಇಲಾಖೆಯ ಸಮಗ್ರ ಕಾರ್ಯವೈಖರಿಯ ಸುಧಾರಣೆಗೆ ಚೈತನ್ಯ ತುಂಬಲಿದೆ ಎಂದು ಅವರು ಹೇಳಿದ್ದಾರೆ.

ವಿಶ್ವವಿಖ್ಯಾತ ಮೈಸೂರು ಚಾಮರಾಜೇಂದ್ರ ಮೃಗಾಲಯ ಮತ್ತು ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಪ್ರಕೃತಿ ನಿರೂಪಣಾ ಕೇಂದ್ರ ಸ್ಥಾಪನೆಯ ಕ್ರಮವೂ ಸ್ವಾಗತಾರ್ಹವಾಗಿದೆ ಎಂದ ಅವರು, ಜಾಗತಿಕ ತಾಪಮಾನ ಏರಿಕೆ ಹಾಗೂ ಹವಾಮಾನ ಬದಲಾವಣೆಯ ಪ್ರತೀಕೂಲ ಪರಿಣಾಮ ಎದುರಿಸುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಶೇ.10ಕ್ಕಿಂತ ಕಡಿಮೆ ಅರಣ್ಯ ಇರುವ ಜಿಲ್ಲೆಗಳಲ್ಲಿ ಸುಮಾರು 75,000 ಹೆಕ್ಟೇರ್ ನಲ್ಲಿ ಅರಣ್ಯೀಕರಣ ಚಟುವಟಿಕೆಗಳಿಗೆ ಕೆ ಕೆ ಆರ್ ಡಿ ಬಿಯ 50 ಕೋಟಿ ರೂ. ಸೇರಿದಂತೆ 150 ಕೋಟಿ ರೂ. ಹಂಚಿಕೆ ಮಾಡಿರುವುದನ್ನು ಈಶ್ವರ್ ಖಂಡ್ರೆ ಅವರು ಸ್ವಾಗತಿಸಿದ್ದಾರೆ.

ರಾಜ್ಯದ ಜನರಿಗೆ ಶುದ್ಧ ಗಾಳಿಯ ಖಾತ್ರಿಗಾಗಿ ಕರ್ನಾಟಕದಾದ್ಯಂತ 15 ಹೊಸ ಪರಿವೇಷ್ಠಿಕ ನಿರಂತರ ವಾಯು ಗುಣಮಟ್ಟದ ಮಾಪನ ಕೇಂದ್ರಗಳನ್ನು ಸ್ಥಾಪಿಸುತ್ತಿರುವುದು ಅತ್ಯಂತ ಅಗತ್ಯ ಹಾಗೂ ಮಹತ್ವದ ಹೆಜ್ಜೆಯಾಗಿದೆ. ಮಾಗಡಿಯ ಹುಲಿಕಲ್-ಕುದೂರು ಗ್ರಾಮದಲ್ಲಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ ಸ್ಮಾರಕ ನಿರ್ಮಿಸುತ್ತಿರುವುದು ಪರಿಸರ ಪ್ರೇಮಿಗಳಿಗೆ ಸ್ಫೂರ್ತಿಯ ತಾಣವಾಗಲಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News