ಬೀದರ್‌: ಭಾರತವನ್ನು ದುರ್ಬಲಗೊಳಿಸುವುದಕ್ಕಾಗಿ ಸುಮಾರು 13 ಕೋಟಿಗೂ ಹೆಚ್ಚು ಮತದಾರರ ಮತದಾನದ ಹಕ್ಕು ಕಿತ್ತುಕೊಳ್ಳುವ ಪಡ್ಯಂತ್ರವನ್ನು ತೀವ್ರವಾಗಿ ಖಂಡಿಸಲಾಗುವುದು. ಎಸ್ಐಆರ್ ರದ್ದಾಗಬೇಕು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್‌ ಅವರನ್ನು ವಜಾಗೊಳಿಸಿ ಜೈಲಿಗೆ ಹಾಕಬೇಕು ಎಂದು ಆಗ್ರಹಿಸಿ ಡಿವೈಎಫ್‌ಐ ಸಂಘಟನೆಯಿಂದ ಹುಮನಾಬಾದ್‌ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಹುಮನಾಬಾದ್‌ ನಗರದ ಪ್ರವಾಸಿ ಮಂದಿರದಿಂದ ತಹಶೀಲ್ದಾರ್‌ ಕಚೇರಿ ವರೆಗೆ ಜನವಿರೋಧಿ ಎಸ್‌ಐಆರ್‌ ರದ್ದಾಗಬೇಕು ಎಂದು ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿ, ಮನವಿ ಪತ್ರ ಸಲ್ಲಿಸಲಾಯಿತು.

ತಹಶೀಲ್ದಾರ್‌ ಅವರ ಮೂಲಕ ರಾಷ್ಟ್ರಪತಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ದಕ್ಕೆ ತರುವ ಮತ್ತು ಸಂವಿಧಾನದ ಮೇಲೆ ದಾಳಿಯ ಸ್ವರೂಪದಲ್ಲಿ ಎಸ್ಐಆರ್ ಜಾರಿ ಮಾಡುತ್ತಿರುವುದು ದೇಶದ ಜನತೆಯು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಫಾರಂ-7 ರ ದುರ್ಬಳಕೆಯು ಸಾಕ್ಷಿಯಾಗಿ ಕಾಣಿಸಿಕೊಳ್ಳುತ್ತಿದೆ. 13 ಕೋಟಿಗೂ ಅಧಿಕ ಮತದಾರರು ಮತದಾನದ ಹಕ್ಕಿನಿಂದ ವಂಚಿತಗೊಳ್ಳುವುದರಿಂದ ತೀವ್ರ ಭೀತಿಯಲ್ಲಿದ್ದಾರೆ ಎಂದು ಆಕ್ರೋಶ ಹೊರಹಾಕಲಾಗಿದೆ.

ನುಸುಳುಕೋರರ ನೆಪದಲ್ಲಿ ದೇಶದ ಕೋಟಿಗಟ್ಟಲೆ ಜನರನ್ನು ಮತದಾನದ ಹಕ್ಕಿನಿಂದ ವಂಚಿಸುವುದು ದೇಶಕ್ಕೆ ಬಗೆಯುವ ದ್ರೋಹವಾಗುವುದು. ಮತದಾನದ ಹಕ್ಕು ಕಸಿಯುವಂತಿಲ್ಲ, ಸಂವಿಧಾನಕ್ಕಿಂತ ಮಿಗಿಲಾದವರು ಯಾರೂ ಇಲ್ಲ ಎಂದು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಹೇಳಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಮತದಾನದ ಹಕ್ಕು ಕಸಿಯುವಂತಹ ಎಲ್ಲ ಹುನ್ನಾರುಗಳು ದೇಶದಲ್ಲಿ ನಡೆಯುತ್ತಿವೆ. ಇದನ್ನು ಪ್ರಶ್ನಿಸಿ, ವಿರೋಧಿಸಿ ದೇಶದ ಯುವಜನತೆ ಮತ್ತು ವಿದ್ಯಾರ್ಥಿಗಳು ಹೋರಾಟಕ್ಕಿಳಿದಿದ್ದಾರೆ ಎಂದು ತಿಳಿಸಲಾಗಿದೆ.

ಆದರೆ, ದಿಲ್ಲಿಯ ಜಂತರ ಮಂತರನಲ್ಲಿ ಹೋರಾಟನಿರತರನ್ನು ಬಂಧಿಸುವ ನೆಪದಲ್ಲಿ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗುತ್ತಿದೆ. ಪ್ರತಿಭಟನಾನಿರತರು ಹೆಜ್ಜೆ-ಹೆಜ್ಜೆಗೂ ಇದನ್ನು ಪ್ರತಿಭಟಿಸುತ್ತಿದ್ದಾರೆ. ದೌರ್ಜನ್ಯ ಎಸಗಿದವರ ಹೆಸರು ಹೇಳುತ್ತಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕ್ಷಿ ಒದಗಿಸುತ್ತಲೇ ವಿರೋಧಿಸುತ್ತಿದ್ದಾರೆ. ಇದು ಒಂದರ್ಥದಲ್ಲಿ ಎರಡನೆಯ ಸ್ವಾತಂತ್ರ್ಯದ ಮುನ್ನುಡಿಯಂತೆ ನಡೆಯುತ್ತಿರುವ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಸಂರಕ್ಷಣೆಯ ಹೋರಾಟವಾಗಿದೆ ಎನ್ನಲಾಗಿದೆ.

ಆದ್ದರಿಂದ, ಭಾರತವನ್ನು ದುರ್ಬಲಗೊಳಿಸುವುದಕ್ಕಾಗಿ ಸುಮಾರು 13 ಕೋಟಿಗೂ ಹೆಚ್ಚು ಮತದಾರರ ಮತದಾನದ ಹಕ್ಕು ಕಿತ್ತುಕೊಳ್ಳುವ ಈ ಪಡ್ಯಂತ್ರ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತವೆ. ಈ ಕೂಡಲೇ ಎಸ್ಐಆರ್ ರದ್ದಾಗಬೇಕು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್‌ ಅವರನ್ನು ವಜಾಗೊಳಿಸಿ ಜೈಲಿಗೆ ಹಾಕಬೇಕು. ಮಹಿಳಾ ಪತ್ರಕರ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಎಸಿಪಿ ವಿವೇಕ್‌ ಭಗತ್ ಮೇಲೆ ಎಫ್ಐಆರ್ ದಾಖಲಿಸಿ, ಕೂಡಲೇ ಅವರನ್ನು ಬಂಧಿಸಬೇಕು. ಯುವತಿಯರ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯ ಎಸಗಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಲಾಗಿದೆ.

ಅ.10ರಂದು ದಿಲ್ಲಿಯ ಜಂತರ ಮಂತರನಲ್ಲಿ ಎಸ್ಐಆರ್ ರದ್ದತಿಗಾಗಿ, ಜ್ಞಾನೇಶ್‌ ಕುಮಾರ್‌ ವಜಾಕ್ಕಾಗಿ ನಡೆಯಲಿರುವ ಹೋರಾಟವನ್ನು ಹತ್ತಿಕ್ಕಲು ಉತ್ತರ ಪ್ರದೇಶ, ಅಸ್ಸಾಂ ಮುಂತಾದ ರಾಜ್ಯಗಳ ಡಿವೈಎಫ್ಐ ಮುಖಂಡರನ್ನು ಆಯಾ ರಾಜ್ಯಗಳ ಪೋಲಿಸರು ಬಂಧಿಸಿ ಗ್ರಹ ಬಂಧನದಲ್ಲಿಟ್ಟಿರುವುದನ್ನು ಕೇಂದ್ರ ಸರಕಾರದ ಭಯವನ್ನು ತೋರುತ್ತದೆ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಹೋರಾಟವು ಇನ್ನೂ ತೀವ್ರಗೊಳ್ಳುವುದು ಎಂದು ಎಚ್ಚರಿಸಲಾಗಿದೆ.

ಈ ಸಂದರ್ಭದಲ್ಲಿ ಡಿವೈಎಫ್‌ಐ ಜಿಲ್ಲಾ ಸಂಚಾಲಕ ಶಶಿಕಾಂತ್‌ ಡಾಂಗೆ, ಶ್ರೀಮಂತ್‌ ಮೇತ್ರೆ, ಪ್ರಭು ಗಡವಂತಿ, ಸುಮೀತ್‌ ಡಾಂಗೆ, ನಬಿಸಾಬ್‌, ಪ್ರಭು ಸಂತೋಷಕರ್‌, ಗೌಸೋದ್ದಿನ್‌ ಸೇರಿದಂತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor