ಹುಮನಾಬಾದ್: ಎಸ್‌ಐಆರ್‌ ವಿರುದ್ಧದ ಹೋರಾಟದಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ಗುರುವಾರ ಹುಮನಾಬಾದ್ ತಾಲೂಕು ಕಾಂಗ್ರೆಸ್ ವತಿಯಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಯಿತು.

ಮಾಜಿ ಸಚಿವ ರಾಜಶೇಖರ್ ಪಾಟೀಲ್ ಅವರ ಮನೆಯಿಂದ ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಕೆಪಿಸಿಸಿ ಸಹಕಾರ ವಿಭಾಗದ ಜಿಲ್ಲಾಧ್ಯಕ್ಷ ಅಭಿಷೇಕ್ ಪಾಟೀಲ್ ಮಾತನಾಡಿ, ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯುತ್ತಿಲ್ಲ. ಕಾಂಗ್ರೆಸ್ ಪಕ್ಷ ರಾಷ್ಟ್ರದಾದ್ಯಂತ ಕಪ್ಪು ದಿನ ಆಚರಿಸುತ್ತಿದೆ. ಜ್ಞಾನೇಶ್ ಕುಮಾರ್ ಅವರು ಅಧಿಕಾರ ದುರುಪಯೋಗಪಡಿಸಿಕೊಂಡಿರುವುದನ್ನು ಖಂಡಿಸುತ್ತೇವೆ. ಜ್ಞಾನೇಶ್ ಕುಮಾರ್ ಅವರಿಗೆ ಕೇಂದ್ರದ ಬಿಜೆಪಿ ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದರು.

ಚುನಾವಣಾ ಆಯುಕ್ತರ ವಿರುದ್ಧದ ಹೋರಾಟಕ್ಕೆ ಕೇಂದ್ರ ಸರ್ಕಾರ ಏಕೆ ಮಧ್ಯಸ್ಥಿಕೆ ವಹಿಸುತ್ತಿದೆ ಎಂದು ಪ್ರಶ್ನಿಸಿದ ಅವರು, ಚುನಾವಣಾ ಆಯುಕ್ತರನ್ನು ರಾಜೀನಾಮೆ ಕೊಡಿಸಿ, ಆ ಸ್ಥಾನದಲ್ಲಿ ನಿಷ್ಠಾವಂತರಿಗೆ ಅವಕಾಶ ನೀಡಬೇಕು. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಹೋರಾಟಗಾರರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಫ್ಸರ್ ಮಿಯಾ ಮಾತನಾಡಿ, ಪ್ರಧಾನಿ ಮೋದಿ ಅವರ ಕೈಗೊಂಬೆಯಾಗಿ ಜ್ಞಾನೇಶ್ ಕುಮಾರ್ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಚುನಾವಣಾ ಆಯೋಗದ ಮುಖ್ಯಸ್ಥರಾಗಿರುವ ಅವರು ಮನಬಂದಂತೆ ಮತಗಳನ್ನು ಕಡಿತಗೊಳಿಸುವ ಕೆಲಸ ಮಾಡಿದ್ದಾರೆ. ಇದನ್ನು ನಡೆಯಲು ಬಿಡುವುದಿಲ್ಲ. ರಾಹುಲ್ ಗಾಂಧಿ ಅವರೊಂದಿಗೆ ನಾವಿದ್ದೇವೆ. ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸುವವರೆಗೆ ಹೋರಾಟ ಮುಂದುವರಿಸುತ್ತೇವೆ ಎಂದು ಎಚ್ಚರಿಸಿದರು.

ಕೆಪಿಸಿಸಿ ಗ್ರಾಮೀಣ ಅಧ್ಯಕ್ಷ ಓಂಕಾರ್ ತುಂಬಾ ಮಾತನಾಡಿ, ಬಿಜೆಪಿಗೆ ಬಾರದ ಮತಗಳನ್ನು, ಅದರಲ್ಲೂ ದಲಿತರು ಹಾಗೂ ಮುಸ್ಲಿಮರ ಮತಗಳನ್ನು ತೆಗೆಯುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು. ಇದರ ವಿರುದ್ಧ ರಾಹುಲ್ ಗಾಂಧಿ ಹೋರಾಟ ಮಾಡುತ್ತಿದ್ದಾರೆ. ಅವರ ಹೋರಾಟವನ್ನು ಸಹಿಸದೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಿ, ಬಂಧಿಸಿರುವುದನ್ನು ವಿರೋಧಿಸಿ ಕಪ್ಪು ಪಟ್ಟಿ ಧರಿಸಿ ಹೋರಾಟ ನಡೆಸುತ್ತಿದ್ದೇವೆ ಎಂದರು.

ಬಿಜೆಪಿಯ ಆಟ ನಡೆಯುವುದಿಲ್ಲ. ಬಿಜೆಪಿ ಕಚೇರಿಯಿಂದ ಬಂದ ಫಾರಂ ನಂಬರ್ 7 ಸಲ್ಲಿಸಲಾಗಿದೆ. ಹುಮನಾಬಾದ್‌ನಲ್ಲಿ ನಮ್ಮ ಬಿಎಲ್‌ಒಗಳು ಉತ್ತಮವಾಗಿ ಕಾರ್ಯನಿರ್ವಹಿಸಿ ಅವರ ಕುತಂತ್ರ ನಡೆಯಲು ಬಿಟ್ಟಿಲ್ಲ ಎಂದು ಹೇಳಿದರು.

ಈ ಪ್ರತಿಭಟನೆಯಲ್ಲಿ ಮಹೇಶ್ ಅಗಡಿ, ಕಂಟೆಪ್ಪಾ ದಾನ, ವೀರಪ್ಪ ಧೂಮ್ಮನ್ಸೂರ್, ರಾಹುಲ್ ಉದ್ದಾ, ಸುರೇಶ್ ಘಾಂಗ್ರೆ, ಸೈಯದ್ ಜಫರ್ ಹಾಗೂ ಸಾಬೀರ್ ಷಾ ಸೇರಿದಂತೆ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor