ಬೀದರ್‌ನ ಕರೇಜ್ ವ್ಯವಸ್ಥೆ ವೀಕ್ಷಿಸಿದ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧಿಕಾರಿಗಳು
ಕರೆಜ್, ಕಲ್ಯಾಣಿ, ಕೆರೆಗಳ ಪುನರುಜ್ಜೀವನಕ್ಕೆ ಕೇಂದ್ರದ ಪೈಲಟ್ ಅಧ್ಯಯನಕ್ಕೆ ಟೀಮ್ ಯುವ ಮನವಿ
ಬೀದರ್ : ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧಿಕಾರಿಗಳ ತಂಡವು ಬೀದರ್ ಜಿಲ್ಲೆಯ ಐತಿಹಾಸಿಕ ಕರೇಜ್ ಜಲವ್ಯವಸ್ಥೆ ಹಾಗೂ ಅದರ ಪುನರುಜ್ಜೀವನ ಕಾರ್ಯವನ್ನು ಅಧ್ಯಯನ ಮಾಡುವ ಉದ್ದೇಶದಿಂದ ಶುಕ್ರವಾರ ಬೀದರ್‌ಗೆ ಭೇಟಿ ನೀಡಿ ಕರೇಜ್ ವ್ಯವಸ್ಥೆಯನ್ನು ವೀಕ್ಷಿಸಿತು.
ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಂಡರ್ ಸೆಕ್ರೆಟರಿ ದೀಪಕ್ ಕುಮಾರ್ ಹಾಗೂ ಪ್ರಾಜೆಕ್ಟ್ ಡೈರೆಕ್ಟರ್ ಸಾಹು ಅವರನ್ನೊಳಗೊಂಡ ತಂಡವು ಬೀದರ್‌ನ ಕರೇಜ್ ವ್ಯವಸ್ಥೆಯ ನಿರ್ಮಾಣ, ಐತಿಹಾಸಿಕ ಹಿನ್ನೆಲೆ, ನೀರು ಸಂಗ್ರಹಣೆ ಮತ್ತು ಅಂತರ್ಜಲ ಮರುಪೂರಣಕ್ಕೆ ಅದರ ಕೊಡುಗೆ ಹಾಗೂ ಇತ್ತೀಚಿನ ಪುನರುಜ್ಜೀವನ ಕಾರ್ಯಗಳ ಕುರಿತು ಮಾಹಿತಿ ಪಡೆದುಕೊಂಡಿತು.
ಈ ಸಂದರ್ಭದಲ್ಲಿ ಟೀಮ್ ಯುವ ಸಂಸ್ಥೆಯ ಸಹ ಸಂಸ್ಥಾಪಕ ವಿನಯಕುಮಾರ್ ಮಾಳಗೆ ಹಾಗೂ ತಂಡದ ಸದಸ್ಯರಾದ ಪ್ರೇಮಕುಮಾರ್ ಮತ್ತು ಶಂಕರ್ ಅವರು ಕೇಂದ್ರದ ಅಧಿಕಾರಿಗಳಿಗೆ ಕರೇಜ್ ವ್ಯವಸ್ಥೆಯ ಕುರಿತು ವಿವರಿಸಿದರು.
ಇಂತಹ ವಿಶಿಷ್ಟ ಅವಕಾಶಗಳು ಮತ್ತು ಸ್ಥಳೀಯ ಜ್ಞಾನವನ್ನು ರಾಜ್ಯ ಸರ್ಕಾರಗಳು ಅರ್ಥಮಾಡಿಕೊಂಡು ಬಳಸಿಕೊಳ್ಳಲು ಪ್ರಾರಂಭಿಸಿದಾಗ, ಒಂದು ಸಾಮಾನ್ಯ ಕೆಲಸವು ದೊಡ್ಡ ಉಪಕ್ರಮವಾಗಿ ರೂಪುಗೊಳ್ಳುತ್ತದೆ. ಬೀದರ್‌ನಲ್ಲಿ ನೀರಿನ ಸಂರಕ್ಷಣೆ, ಸಂಗ್ರಹಣೆ ಮತ್ತು ಅಂತರ್ಜಲ ಮರುಪೂರಣಕ್ಕೆ ಸಂಬಂಧಿಸಿದಂತೆ ಲಭ್ಯವಿರುವ ಅನುಭವಗಳು ದೇಶದ ವಿವಿಧ ಭಾಗಗಳಲ್ಲಿ ಎದುರಾಗುತ್ತಿರುವ ನೀರಿನ ಕೊರತೆ ಮತ್ತು ಜಲಸಂಕಷ್ಟಕ್ಕೆ ಪರಿಹಾರ ಕಂಡುಕೊಳ್ಳಲು ಮಾರ್ಗದರ್ಶಕ ಅಂಶಗಳಾಗಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟರು.
ಐತಿಹಾಸಿಕ ಜಲಸಂಪನ್ಮೂಲಗಳನ್ನು ಕೇವಲ ಪಾರಂಪರಿಕ ಸ್ಮಾರಕಗಳಾಗಿ ನೋಡುವ ಬದಲು, ಅವುಗಳಲ್ಲಿ ಅಡಗಿರುವ ಜಲ ನಿರ್ವಹಣೆ, ಸಮುದಾಯದ ಪಾಲ್ಗೊಳ್ಳುವಿಕೆ ಮತ್ತು ಪರಿಸರ ಹೊಂದಾಣಿಕೆಯ ಜ್ಞಾನವನ್ನು ಇಂದಿನ ಅಭಿವೃದ್ಧಿ ಯೋಜನೆಗಳಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು.
ಕರೆಜ್, ಕಲ್ಯಾಣಿ, ಕೆರೆಗಳ ಪುನರುಜ್ಜೀವನಕ್ಕೆ ಕೇಂದ್ರದ ಪೈಲಟ್ ಅಧ್ಯಯನಕ್ಕೆ ಟೀಮ್ ಯುವ ಮನವಿ : ಬೀದರ್‌ನಲ್ಲಿ ಕರೇಜ್ ಜೊತೆಗೆ ಐತಿಹಾಸಿಕ ಸ್ಟೆಪ್‌ವೆಲ್‌ಗಳು, ತೆರೆದ ಬಾವಿಗಳು, ಕೆರೆ-ಕಟ್ಟೆಗಳು ಹಾಗೂ ಇತರ ಸಾಂಪ್ರದಾಯಿಕ ಜಲಸಂಪನ್ಮೂಲಗಳ ಪುನರುಜ್ಜೀವನಕ್ಕೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ನಡೆದಿರುವ ಅನುಭವವನ್ನು ದಾಖಲಿಸಿ ಯುವ ಟೀಮ್‌ನ ಸದಸ್ಯರು, ಇದನ್ನು ಕೇಂದ್ರ ಸರ್ಕಾರದ ಮಟ್ಟದಲ್ಲಿ ಪೈಲಟ್ ಅಧ್ಯಯನವಾಗಿ ಕೈಗೆತ್ತಿಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ವೇಳೆ ಟೀಮ್ ಯುವ ಸಂಸ್ಥೆಯ ಸಹ ಸಂಸ್ಥಾಪಕ ವಿನಯಕುಮಾರ್ ಮಾಳಗೆ ಅವರು ಮಾತನಾಡಿ, ರಾಜ್ಯ ಸರ್ಕಾರವು ಈಗಾಗಲೇ ಬೀದರ್‌ನ ಕರೇಜ್ ಪುನರುಜ್ಜೀವನ ಕಾಮಗಾರಿಗಳ ಎರಡನೇ ಹಂತಕ್ಕೆ ಸುಮಾರು 10 ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ರಾಜ್ಯ ಸರ್ಕಾರವು ಕರೇಜ್ ಪುನರುಜ್ಜೀವನದ ಮುಂದಿನ ಹಂತಕ್ಕೆ 10 ಕೋಟಿ ರೂ. ಅನುದಾನ ನೀಡಿರುವುದು ಸಂತಸದ ಸಂಗತಿ. ಇದರಿಂದ ಮುಂದಿನ ಹಂತದ ಸಂರಕ್ಷಣೆ ಮತ್ತು ಪುನರುಜ್ಜೀವನ ಕಾರ್ಯಗಳನ್ನು ಇನ್ನಷ್ಟು ವ್ಯವಸ್ಥಿತವಾಗಿ ಕೈಗೊಳ್ಳಲು ಸಾಧ್ಯವಾಗಲಿದೆ. ಭವಿಷ್ಯದಲ್ಲಿ ಈ ಕಾರ್ಯದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕೊಡುಗೆ ನೀಡುವ ಆಶಯ ಟೀಮ್ ಯುವ ಸಂಸ್ಥೆಗೆ ಇದೆ ಎಂದು ಹೇಳಿದರು.
ಕೇಂದ್ರದ ಅಧಿಕಾರಿಗಳೊಂದಿಗೆ ನಡೆದ ಈ ಅಧ್ಯಯನ ಪ್ರವಾಸದಲ್ಲಿ ಕಮಲನಗರ್ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತರಾವ್ ಕೌಟಗೆ, ಪಿಡಿಒ ಶರತಕುಮಾರ್, ಉಪ ಕಾರ್ಯದರ್ಶಿ ಸೂರ್ಯಕಾಂತ್ ಬಿರಾದಾರ್ ಹಾಗೂ ಪ್ರಾಜೆಕ್ಟ್ ಕೋ-ಆರ್ಡಿನೇಟರ್ ದೀಪಕ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.