ಬೀದರ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬಂಧನವನ್ನು ಖಂಡಿಸಿ ಹಾಗೂ ಬಿಜೆಪಿ ವಿರುದ್ಧ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಗುರುವಾರ ಬೀದರ್ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಯುವ ಕಾಂಗ್ರೆಸ್ ವತಿಯಿಂದ ಕೈಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಭಾಗವಹಿಸಿದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿ, ಟೈರ್‌ಗೆ ಬೆಂಕಿ ಹಚ್ಚುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ರಾಹುಲ್ ಗಾಂಧಿ ಅವರ ಬಂಧನವನ್ನು ತೀವ್ರವಾಗಿ ಖಂಡಿಸಿದ ಅವರು, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳನ್ನು ಕಾಪಾಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಅಮೃತರಾವ್ ಚಿಮಕೋಡೆ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರ ರಾಹುಲ್ ಗಾಂಧಿ ಅವರನ್ನು ಬಂಧಿಸಿ, ಪ್ರಿಯಾಂಕಾ ಗಾಂಧಿ ಅವರ ಮೇಲೆ ದಾಳಿ ನಡೆಸುವ ಮೂಲಕ ದೊಡ್ಡ ದಂಗೆ ಮಾಡುತ್ತಿದೆ ಎಂದು ಆರೋಪಿಸಿದರು. ಭಾರತ ಸ್ವತಂತ್ರ ದೇಶವಾಗಿದ್ದು, ಇಲ್ಲಿ ಪ್ರತಿಭಟನೆ ನಡೆಸುವುದು ಎಲ್ಲರ ಹಕ್ಕಾಗಿದೆ. ಕಾನೂನು ಉಲ್ಲಂಘನೆಯಾಗಿದ್ದರೆ ಪ್ರಕರಣ ದಾಖಲಿಸಲಿ ಎಂದರು.

ಸ್ವಾತಂತ್ರ್ಯಕ್ಕೂ ಮೊದಲು ಬಡವರಿಗೆ ಮತದಾನದ ಅಧಿಕಾರ ಇರಲಿಲ್ಲ. ಡಾ. ಬಿ.ಆರ್. ಅಂಬೇಡ್ಕರ್ ಅವರು ಎಲ್ಲರಿಗೂ ಮತದಾನದ ಹಕ್ಕು ನೀಡಿದ್ದಾರೆ. ಆದರೆ ಇದೀಗ ಆ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮತದಾನ ಕಳ್ಳತನ ಮಾಡಲು ಜ್ಞಾನೇಶ್ ಕುಮಾರ್ ಅವರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ ಅವರು, ಅವರನ್ನು ಆ ಸ್ಥಾನದಿಂದ ತೆಗೆದುಹಾಕಬೇಕು ಎಂದು ರಾಹುಲ್ ಗಾಂಧಿ ಅವರು ಹೇಳುತ್ತಿದ್ದಾರೆ. ಮತದಾನ ಕಳ್ಳತನ ತಡೆಯಲು ಕಾಂಗ್ರೆಸ್ ಪಕ್ಷ ಸಿದ್ಧವಾಗಿದೆ ಎಂದರು.

ಈ ಸಂದರ್ಭದಲ್ಲಿ ಎಂ.ಡಿ. ಗೌಸ್, ಬಿಡಿಎ ಅಧ್ಯಕ್ಷ ವಿನೋದ್ ಅಪ್ಪೆ, ವಿಠಲದಾಸ್ ಪ್ಯಾಗೆ, ಪರ್ವೇಜ್ ಕಮಾಲ್, ಯೂಸುಫ್ ಖಾನ್, ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಫರೀದ್ ಖಾನ್, ಬೀದರ್ ದಕ್ಷಿಣ ಯುವ ಕಾಂಗ್ರೆಸ್ ಅಧ್ಯಕ್ಷ ಇಮ್ರಾನ್ ಖಾನ್, ಜೋಶ್ವಾ, ಶಾಂತಕುಮಾರ್ ಕೊಡ್ಡಿಕರ್, ಶರಣಪ್ಪ ಶರ್ಮಾ, ಅನಿಲ್ ನಿಡೋದಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor