ಬೀದರ್ | ಡಿಸಿ ಜೊತೆ ರೈತರ ಸಭೆ ವಿಫಲ, ಪ್ರತಿ ಟನ್ ಕಬ್ಬಿಗೆ 3,100 ರೂ. ನಿಗದಿಗೆ ಒತ್ತಾಯಿಸಿ ರೈತರಿಂದ ಪ್ರತಿಭಟನೆ
ಬೀದರ್ : ಕಬ್ಬಿನ ಬೆಲೆ ನಿಗದಿಗೊಳಿಸಲು ರೈತರು ಜಿಲ್ಲಾಧಿಕಾರಿಗಳ ಜೊತೆಗೆ ಇಂದು ಮೂರನೇ ಸಭೆ ನಡೆದಿದೆ. ಆದರೆ, ಜಿಲ್ಲಾಧಿಕಾರಿಗಳು ಹೇಳಿದ ಕಬ್ಬಿನ ಬೆಲೆಯನ್ನು ಒಪ್ಪದ ರೈತರು ನಗರದ ಅಂಬೇಡ್ಕರ್ ವೃತ್ತದ ಮುಂದೆ ಪ್ರತಿಭಟನೆ ನಡೆಸಿದರು.
ಕಬ್ಬಿನ ಬೆಲೆ ನಿಗದಿಗೊಳಿಸಲು ಇಂದು ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಪ್ರತಿ ಟನ್ ಕಬ್ಬಿಗೆ 2,900 ರೂ. ಎಂದು ಹೇಳಿದ್ದಾರೆ. ಆದರೆ ನಮ್ಮ ಬೇಡಿಕೆ ಪ್ರತಿ ಟನ್ ಕಬ್ಬಿಗೆ 3,100 ರೂ. ಇದೆ. ಹಾಗಾಗಿ ಜಿಲ್ಲಾಧಿಕಾರಿಗಳು ನಿಗದಿಪಡಿಸಿದ ಬೆಲೆಯನ್ನು ನಾವು ಒಪ್ಪುವುದಿಲ್ಲ. ಆದ್ದರಿಂದ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ ರೈತರು ತಿಳಿಸಿದರು.
ಬುಧವಾರ ಕಬ್ಬಿನ ಬೆಲೆ ನಿಗದಿಗೊಳಿಸಬೇಕು ಎಂದು ಒತ್ತಾಯಿಸಿ ಹುಮನಾಬಾದ್ ನಗರದಲ್ಲಿ ರೈತರಿಂದ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಈ ಪ್ರತಿಭಟನೆಯ ನಂತರ ಜಿಲ್ಲಾಧಿಕಾರಿಗಳು ಕಬ್ಬಿನ ಬೆಲೆ ನಿಗದಿಗೊಳಿಸಲು ಇಂದು ರೈತರೊಂದಿಗೆ ಸಭೆ ಕರೆದಿದ್ದರು. ಆದರೆ ಸಭೆಯಲ್ಲಿ ರೈತರ ಬೇಡಿಕೆಯಂತೆ ಬೆಲೆ ನಿಗದಿಗೊಳಿಸದ ಕಾರಣ ರೈತರು ಪ್ರತಿಭಟನೆ ನಡೆಸಿದರು.
ನಮ್ಮ ಬೇಡಿಕೆಯಂತೆ ಪ್ರತಿ ಟನ್ ಕಬ್ಬಿಗೆ 3,100 ರೂ. ಬೆಲೆ ನಿಗದಿಗೊಳಿಸಬೇಕು. ಇಲ್ಲದಿದ್ದರೆ ಕೆಲ ದಿನಗಳಲ್ಲಿ ನಗರದ ಪ್ರಮುಖ ರಸ್ತೆಗಳನ್ನು ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸುತ್ತೇವೆ ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಮಲ್ಲಿಕಾರ್ಜುನ್ ಸ್ವಾಮಿ, ಸಿದ್ರಾಮಪ್ಪಾ ಆಣದೂರೆ, ಶ್ರೀಮಂತ್ ಬಿರಾದಾರ್, ದಯಾನಂದ್ ಸ್ವಾಮಿ, ಶಂಕರೆಪ್ಪಾ ಮರ್ಕಲ್, ಕೊಂಡಿಬಾ ಪಾಂಡ್ರೆ, ಶಿವರಾಜ್ ಪಾಟೀಲ್, ಬಾಬು ಹೊನ್ನಾ, ನಜೀರ್ ಅಹ್ಮದ್ ಚೊಂಡಿ, ಪ್ರಕಾಶ್ ಬಾವುಗೆ, ಶಾಂತಮ್ಮ ಮೂಲಗೆ, ಶಿವಲೀಲಾ ಹೋಳಸಮುದ್ರ, ವಿಜಯಕುಮಾರ ಬಾವುಗೆ, ವೀರಾರೆಡ್ಡಿ, ವಿಠಲರಾವ್, ನಾಗಶೆಟ್ಟಿ, ಭೀಮರಾವ್ ಹಾಗೂ ಖಮರ್ ಪಟೇಲ್ ಸೇರಿದಂತೆ ಅನೇಕ ರೈತ ನಾಯಕರು ಉಪಸ್ಥಿತರಿದ್ದರು.