ಬೀದರ್ | ನಕಲಿ ವೈದ್ಯರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ : ಡಿಸಿ ಶಿಲ್ಪಾ ಶರ್ಮಾ ಸೂಚನೆ
ಬೀದರ್ : ಕಮಲನಗರದಲ್ಲಿ ನಕಲಿ ವೈದ್ಯ ವೃತ್ತಿ ನಡೆಸುತ್ತಿದ್ದ ಕಲ್ಕತ್ತಾ ಮೂಲದ ಗೌತಮ್ ಸಮದರ್ ಹಾಗೂ ಸುಜಲಕುಮಾರ್ ಸೇನ್ ಎಂಬುವರಿಗೆ ಈ ಹಿಂದೆ ತಲಾ 25 ಸಾವಿರ ರೂ. ದಂಡ ವಿಧಿಸಿ ಮತ್ತೆ ವೈದ್ಯ ವೃತ್ತಿ ನಡೆಸದಂತೆ ಎಚ್ಚರಿಕೆ ನೀಡಲಾಗಿತ್ತು. ಆದರೆ, ಇವರು ಮತ್ತೆ ವೈದ್ಯ ವೃತ್ತಿ ಮುಂದುವರಿಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ, ಇಬ್ಬರಿಗೂ ತಲಾ 2 ಲಕ್ಷ 50 ಸಾವಿರ ರೂ.ಗಳ ಭಾರಿ ದಂಡ ವಿಧಿಸುವುದರ ಜೊತೆಗೆ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಸೂಚಿಸಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಭಾಂಗಣದಲ್ಲಿ ನಡೆದ ಕೆಪಿಎಂಇ ಜಿಲ್ಲಾ ಮಟ್ಟದ ನೋಂದಣಿ ಮತ್ತು ಕುಂದುಕೊರತೆ ಪರಿಹಾರ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಮಲನಗರ ತಾಲ್ಲೂಕಿನ ಚಾಂದೋರಿ ಗ್ರಾಮದ ಪ್ರೇಮಕುಮಾರ್ ಅವರು ಸರ್ಕಾರಿ ಶುಶ್ರೂಷಾಧಿಕಾರಿಯಾಗಿ ಮುಧೋಳ್(ಬಿ) ಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಅನಧಿಕೃತವಾಗಿ ಖಾಸಗಿ ಕ್ಲಿನಿಕ್ ನಡೆಸುತ್ತಿದ್ದುದು ದಾಳಿ ವೇಳೆ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರು ಇವರನ್ನು ಜ.31ರಂದು ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿದ್ದರು. ಎರಡನೇ ಬಾರಿ ದಾಳಿ ನಡೆಸಿದಾಗ ಅಮಾನತಿನಲ್ಲಿದ್ದರೂ ಸಹ ಪ್ರೇಮಕುಮಾರ್ ಅವರು ಖಾಸಗಿ ವೈದ್ಯ ವೃತ್ತಿ ಮುಂದುವರಿಸಿದ ಕಾರಣ ಅ.5ರಂದು ಎರಡನೇ ಬಾರಿ ದಾಳಿ ನಡೆಸಿ ಕ್ಲಿನಿಕ್ ಅನ್ನು ಸೀಜ್ ಮಾಡಲಾಗಿದೆ ಎಂದು ತಿಳಿಸಿದರು.
ಡಾ. ಹರೀಶ್ ವಿಶ್ವಕರ್ಮ ಅವರು ಆಯುರ್ವೇದ ವೈದ್ಯಕೀಯ ಪದವಿ ಪಡೆದು, ಕಮಠಾಣ ಗ್ರಾಮದ ಪ್ರಗತಿ ಕ್ಲಿನಿಕ್‌ನಲ್ಲಿ ಅಲೋಪತಿ ವೈದ್ಯ ವೃತ್ತಿ ನಡೆಸುತ್ತಿರುವುದು ಕೆಪಿಎಂಇ ಕಾಯಿದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ 50 ಸಾವಿರ ರೂ. ದಂಡ ವಿಧಿಸಿ, ಅಲೋಪತಿ ಪ್ರಾಕ್ಟೀಸ್ ಮಾಡದಂತೆ ಎಚ್ಚರಿಕೆ ನೀಡಲಾಯಿತು.
ಯಾವುದೇ ಅಧಿಕೃತ ವೈದ್ಯಕೀಯ ಪದವಿ ಇಲ್ಲದೆ ವೈದ್ಯ ವೃತ್ತಿ ನಡೆಸುತ್ತಿದ್ದ ನಕಲಿ ವೈದ್ಯರಾದ ರಾಜಶೇಖರ್ (ಜಂಬಗಿಯ ಬಾಲಜಿ ಕ್ಲಿನಿಕ್) ಸುಭಾಷ್‌ದಾಸ್ (ಆಣದೂರ್) ಹಾಗೂ ವಿಶ್ವಜೀತ್ ಬೀರಿ (ಕೆ) ಇವರಿಗೆ ತಲಾ 50 ಸಾವಿರ ರೂ. ದಂಡ ವಿಧಿಸಿ ಪುನಃ ವೈದ್ಯ ವೃತ್ತಿ ನಡೆಸದಂತೆ ಎಚ್ಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗಿತ್ತೆ ಮಾಧವ್ ವಿಠ್ಠಲರಾವ್, ಸಹಾಯಕ ಆಯುಕ್ತ ಅಭಿನವ್ ಜೈನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅನೀಲಕುಮಾರ್ ಚಿಂತಾಮಣಿ, ಕೆಪಿಎಂಇ ಜಿಲ್ಲಾ ನೋಡಲ್ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು ಉಪಸ್ಥಿತರಿದ್ದರು.