×
Ad

ಬೀದರ್ | ಪ್ರತಿ ಟನ್ ಕಬ್ಬಿಗೆ 2,900 ರೂ. ದರ ನಿಗದಿಪಡಿಸಿದ ಡಿಸಿ ಶಿಲ್ಪಾ ಶರ್ಮಾ

Update: 2025-11-13 20:28 IST

ಬೀದರ್ : ಕಬ್ಬು ದರ ನಿಗದಿ ಸಂಬಂಧ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರ ಅಧ್ಯಕ್ಷತೆಯಲ್ಲಿ ರೈತರೊಂದಿಗೆ ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ 2,900 ರೂ. ದರ ನಿಗದಿಪಡಿಸುವುದಾಗಿ ಡಿಸಿ ಶಿಲ್ಪಾ ಶರ್ಮಾ ಅವರು ತಿಳಿಸಿದರು.

ಸಭೆಯಲ್ಲಿ ಮಾತನಾಡಿದ ಅವರು, ರೈತರಿಗೂ ಹಾಗೂ ಕಾರ್ಖಾನೆಯವರಿಗೂ ಅನ್ಯಾಯವಾಗದಂತೆ 2,900 ರೂ. ದರ ನಿಗದಿಪಡಿಸುವುದಾಗಿ ಹಾಗೂ ಇದು ಕಳೆದ ವರ್ಷಕ್ಕಿಂತ 250 ರೂ. ಹೆಚ್ಚಿನ ದರವಾಗಿದೆ. ಕಳೆದ ವರ್ಷ ಪ್ರತಿ ಟನ್ ಕಬ್ಬಿಗೆ 2,650 ರೂ. ನೀಡಲಾಗುತ್ತಿತ್ತು. ಆದರೆ ಈ ವರ್ಷ 2,750 ರೂ. ರಾಜ್ಯ ಸರ್ಕಾರದಿಂದ 50 ರೂ. ಹಾಗೂ ಸಕ್ಕರೆ ಕಾರ್ಖಾನೆಗಳಿಂದ 50 ರೂ. ಹೆಚ್ಚುವರಿಯಾಗಿ 2,850 ರೂ. ನೀಡುವ ಬಗ್ಗೆ ಚರ್ಚೆಯಾಗಿತ್ತು ಎಂದರು.

ಆದರೆ ಜಿಲ್ಲೆಯ ಕಬ್ಬು ಬೆಳೆಗಾರರು ಬುಧವಾರ ಹುಮನಾಬಾದ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದವು. ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ, ಇಂದು ಸಭೆ ನಡೆಸುವುದಾಗಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಎಲ್ಲ ರೈತ ಮುಖಂಡರ ಹಾಗೂ ಕಬ್ಬು ಬೆಳೆಗಾರ ಸಂಘಟನೆಗಳ ಹಾಗೂ ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರ ಸಭೆ ಜರುಗಿತು.

ಈ ವರ್ಷ ಅತಿವೃಷ್ಠಿಯಿಂದಾಗಿ ಬಹುತೇಕ ಬೆಳೆಗಳು ಕೈಕೊಟ್ಟಿದ್ದು, ಪ್ರತಿ ಟನ್‌ ಕಬ್ಬಿಗೆ 3,100 ರೂ. ದರ ನಿಗದಿಪಡಿಸುವಂತೆ ಸಭೆಯಲ್ಲಿ ರೈತ ಮುಖಂಡರು ಆಗ್ರಹಿಸಿದರು.

ರೈತರು ಹಾಗೂ ಕಾರ್ಖಾನೆಗಳು ಇಬ್ಬರೂ ಉಳಿಯಬೇಕು, ಈ ನಿಟ್ಟಿನಲ್ಲಿ 2900 ರೂ. ದರ ನಿಗದಿಪಡಿಸಲಾಗುವುದು. ಕಳೆದ ವರ್ಷಕ್ಕಿಂತ 250 ರೂ. ಹೆಚ್ಚಿನ ದರ ರೈತರಿಗೆ ಲಭಿಸಲಿದೆ. ಅಲ್ಲದೇ 2,900 ರೂ. ಕಾರ್ಖಾನೆಗಳು ತಪ್ಪದೇ ಜಮೆ ಮಾಡುವಂತೆ ತಾವು ನೋಡಿಕೊಳ್ಳುತ್ತೇವೆ ಬೀದರ್‌ನಲ್ಲಿ 9.6 ರಿಕವರಿ ದರ ಇದ್ದು, ಹಾವೇರಿ ಜಿಲ್ಲೆಯಲ್ಲಿಯೂ ಸಹ ಸಮನಾಗಿದ್ದು, ಅಲ್ಲಿಯ ರೈತರು 2,900 ರೂ. ದರಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಶಿಲ್ಪಾ ಶರ್ಮಾ ಅವರು ತಿಳಿಸಿದರು.

ಆದರೆ, ಇದನ್ನು ಒಪ್ಪದ ರೈತ ಮುಖಂಡರು 3,100 ರೂ. ದರ ನಿಗದಿಪಡಿಸುವಂತೆ ಕೋರಿದರು. ಜಿಲ್ಲಾಧಿಕಾರಿಗಳು 2,900 ರೂ. ನಿಗದಿಪಡಿಸುವುದಾಗಿ ತಮ್ಮ ನಿರ್ಧಾರವನ್ನು ತಿಳಿಸಿದಾಗ, ರೈತ ಮುಖಂಡರು ತಮ್ಮ ಹೋರಾಟ ಮುಂದುವರೆಸುವುದಾಗಿ ಹೇಳಿದರು.

ಸಭೆಯಲ್ಲಿ ಆಹಾರ ನಾಗರೀಕ ಸರಬರಾಜು ಉಪನಿರ್ದೇಶಕ ಪ್ರವೀಣ್ ಬರಗಲ್ ಸೇರಿದಂತೆ ವಿವಿಧ ರೈತ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆ ಎಂಡಿಗಳು, ಮಾಲಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News