ಬೀದರ್ | ಗಾಂಧೀಜಿ ತಮ್ಮ ವಿಚಾರ ಪ್ರಸರಣಕ್ಕಾಗಿ ಪತ್ರಿಕಾ ಮಾಧ್ಯಮ ಆಶ್ರಯಿಸಿದ್ದರು : ವೀರಾಂತರೆಡ್ಡಿ ಜಂಪಾ
ಬೀದರ್ : ಗಾಂಧೀಜಿಯವರು ಜನತೆಯ ಎಲ್ಲ ವಿಷಯಗಳಿಗೂ ಸ್ಪಂದಿಸುತ್ತಿದ್ದರು. ಅವರು ಎಲ್ಲ ಜನರಿಗೂ ಬೇಕಾಗುವ ವ್ಯಕ್ತಿತ್ವವುಳ್ಳವರಾಗಿದ್ದರು. ಇದನ್ನು ಅರಿತ ಅವರು ತಮ್ಮ ವಿಚಾರ ಪ್ರಸರಣಕ್ಕಾಗಿ ಪತ್ರಿಕಾ ಮಾಧ್ಯಮವನ್ನು ಆಶ್ರಯಿಸಿದ್ದರು ಎಂದು ಹುಮನಾಬಾದ್ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ವೀರಾಂತರೆಡ್ಡಿ ಜಂಪಾ ಅವರು ತಿಳಿಸಿದರು.
ಇಂದು ಹುಮನಾಬಾದ್ ನಗರದ ಎಸ್‌ಬಿಸಿಎಸ್ ಕಲಾ ಮತ್ತು ಎಸ್ ವಿ ವಾಣಿಜ್ಯ, ವಿಜ್ಞಾನ ಕಾಲೇಜಿನಲ್ಲಿ ಹಮ್ಮಿಕೊಂಡ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿ ಅವರ ಸರ್ವೋದಯ ತತ್ವದ ಮಹತ್ವ ಕುರಿತು ವಿಶೇಷ ಉಪನ್ಯಾಸ ನೀಡುತ್ತಾ ಅವರು ಮಾತನಾಡಿದರು.
‘ಇಂಡಿಯನ್ ಒಪೀನಿಯನ್’ ಇಂಗ್ಲಿಷ್ ಪತ್ರಿಕೆಯು ಗಾಂಧೀಜಿಯವರ ದಕ್ಷಿಣ ಆಫ್ರಿಕಾದ ಹೋರಾಟದ ಕಾಲದಲ್ಲಿ ಆರಂಭವಾಗಿತ್ತು. ಇನ್ನು ಭಾರತದಲ್ಲಿ 'ಹರಿಜನ’ ಪತ್ರಿಕೆ ಅವರ ಮುಖವಾಣಿಯಾಯಿತು. ಗಾಂಧಿ ತಮ್ಮ ಭಾವನೆ, ಅನಿಸಿಕೆ, ತಾತ್ವಿಕ ಚಿಂತನೆ, ಹೋರಾಟ ಮಾರ್ಗ, ಎಲ್ಲವನ್ನೂ ಹಿಂದಿ, ಗುಜರಾತಿ ಮತ್ತು ಇಂಗ್ಲಿಷ್‌ನಲ್ಲಿ ಪತ್ರಿಕೆಗಳ ಮೂಲಕ ತಿಳಿಸುತ್ತಿದ್ದರು. ಆ ಕಾರಣದಿಂದ ಅವರ ವಿಚಾರದೆಳೆಗಳು ಅನಂತವಾಗಿ ಇಂದಿಗೂ ಅಚ್ಚಿನ ಪ್ರತಿಗಳಲ್ಲಿ ಲಭ್ಯವಾಗಿವೆ ಎಂದರು.
ಗಾಂಧೀಜಿಯವರ ವಿಚಾರಗಳನ್ನು ಪಟ್ಟಿ ಮಾಡುವುದಾದರೆ ರಾಜಕೀಯ ಮತ್ತು ಸಾಮಾಜಿಕ ಬೆಳವಣಿಗೆಗಳು, ಆರ್ಥಿಕ ವಿಷಯಗಳು, ಅನುಯಾಯಿಗಳಿಗೆ ನೈತಿಕ ಹೊಣೆಗಾರಿಕೆಯ ಸೂತ್ರಗಳು, ಹೋರಾಟ ಮಾರ್ಗದ ವಿಧಿ ವಿಧಾನ, ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗೆ ಪರಿಹಾರ, ಹಾಗೆಯೇ ಅಸ್ಪಶ್ಯತೆಯ ಬಗ್ಗೆ ಗಟ್ಟಿ ನಿಲುವಿನ ಖಂಡನೆ ಮತ್ತು ಪರಿವರ್ತನೆಯ ಮಾರ್ಗ, ವಿಭಿನ್ನ ಧಾರ್ಮಿಕರ ನಡುವೆ ಸಾಮರಸ್ಯದ ಅಗತ್ಯ, ಗ್ರಾಮಗಳ ಪುನರ್ ರಚನೆಯಲ್ಲಿ ನೈರ್ಮಲ್ಯದ ಪ್ರಧಾನ ಉದ್ದೇಶ, ನೂಲುವ ಕ್ರಿಯೆಯ ಮಹತ್ವ, ಅಂತೆಯೇ ಯಾರನ್ನೂ ದ್ವೇಷಿಸದಿರುವ ಮನೋಧರ್ಮದ ತಾತ್ವಿಕತೆಯನ್ನು ಯಾವ ಓದುಗನೂ ಗಾಂಧೀಜಿಯ ಬರಹಗಳಲ್ಲಿ ಕಾಣಬಹುದು ಎಂದು ನುಡಿದರು.
ಯುವ ಸಾಹಿತಿ ಶಕೀಲ್ ಐ.ಎಸ್ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹುಮನಾಬಾದಿನ ಎಸ್ ಬಿ ಸಿ ಎಸ್ ಕಲಾ ಮತ್ತು ಎಸ್ ವಿ ವಾಣಿಜ್ಯ ವಿಜ್ಞಾನ ಕಾಲೇಜು ಪ್ರಾಚಾರ್ಯ ಪ್ರೊ. ರವೀಂದ್ರನಾಥಪ್ಪ ಕೆ ಅವರು ವಹಿಸಿದ್ದರು.
ಈ ಸಂದರ್ಭದಲ್ಲಿ ಹುಮನಾಬಾದ್ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ರವೀಂದ್ರಕುಮಾರ್ ಭಂಡಾರಿ, ಚಕೋರ ಸಾಹಿತ್ಯ ಜಿಲ್ಲಾ ಸಂಚಾಲಕಿ ಡಾ. ಮಕ್ತುಂಬಿ ಎಂ, ಸಂಜೀವಿನಿ, ಭಾಗ್ಯಶ್ರೀ, ಪ್ರೊ.ದೀಪಕ್, ಪ್ರೊ.ಪ್ರವೀಣ್ ಈಶ್ವರ್ ಹಾಗೂ ಡಾ. ಸಂಗಪ್ಪ ತೌಡಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.