ಬೀದರ್ | ಅ.26ರಂದು ಮಾಜಿ ಸೈನಿಕ ಸಂಘದ ಸುವರ್ಣ ಮಹೋತ್ಸವ ಆಚರಣೆ : ಅಶೋಕಕುಮಾರ್ ಕರಂಜಿ
ಬೀದರ್ : ಅ.26ರ ಸಾಯಂಕಾಲ 4 ಗಂಟೆಗೆ ನಗರದ ಡಾ.ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಮಾಜಿ ಸೈನಿಕರ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಗೌರವಾಧ್ಯಕ್ಷ ಅಶೋಕಕುಮಾರ್ ಕರಂಜಿ ಅವರು ತಿಳಿಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸುವರ್ಣ ಮಹೋತ್ಸವ ಆಚರಣೆಯನ್ನು ಬಹಳ ಅದ್ದೂರಿಯಿಂದ ಆಚರಿಸಲಾಗುತ್ತದೆ. ಬೀದರ್, ಸಂಘವನ್ನು 50 ವಸಂತ ಪೂರೈಸಿದ ಸಂದರ್ಭದಲ್ಲಿ ಜಿಲ್ಲಾ ಮಾಜಿ ಸೈನಿಕ ಸಂಘದ ಅಧಿಕಾರಿಗಳು, ಮಾಜಿ ಸೈನಿಕರು ಮತ್ತು ಅವರ ಕುಟುಂಬದ ಸದಸ್ಯರಿಗೆ ಈ ಕಾರ್ಯಕ್ರಮದಲ್ಲಿ ಭೂ ಸೈನ್ಯ, ಜಲ ಸೈನ್ಯ ಮತ್ತು ವಾಯು ಸೈನ್ಯ ಸೇರಿದಂತೆ ಜಿಲ್ಲೆಯ ಎಲ್ಲಾ ಸದಸ್ಯರು ಈ ಸುವರ್ಣ ಮಹೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಬೀದರ್ ಜಿಲ್ಲಾ ಮಾಜಿ ಸೈನಿಕ್ ಸಂಘವು ಇಂತಹ ಅನೇಕ ಸಹಾಯ ಹಸ್ತದ ಮೂಲಕ ಮಾಜಿ ಸೈನಿಕರಿಗೆ ಹಾಗೂ ಅವರ ಕುಟುಂಬಸ್ಥರಿಗೆ ಅನೇಕ ಕಾರ್ಯಗಳನ್ನು ಮಾಡಲಾಗುತ್ತಿದೆ. ಇಂದು ಮಾಜಿ ಸೈನಿಕ ಸಂಘವು ಸುವರ್ಣ ಮಹೋತ್ಸವ ಆಚಾರಣೆಗೆ ಒಂದು ದೊಡ್ಡ ಹೆಜ್ಜೆ ಇರಿಸಿದೆ. ಮಾಜಿ ಸೈನಿಕರ ಮತ್ತು ಅವರ ಕುಟುಂಬದ ಕುಂದು ಕೊರತೆಗಳನ್ನು ನಿವಾರಿಸುವುದೆ ಈ ಸಂಘದ ಮುಖ್ಯ ಉದ್ದೇಶವಾಗಿದೆ.
ಉದಾಹರಣೆ ಪಿಂಚಣಿಯಲ್ಲಿ ಯಾವುದೇ ವ್ಯತ್ಯಾಸ ಅಥವಾ ಮಾಜಿ ಸೈನಿಕರ ಮರಣದ ನಂತರ ಹೆಂಡತಿಗೆ ಪಿಂಚಣಿ ವರ್ಗಾವಣೆ ಮಾಡುವುದು. ECHS Card, Smart Card ನಲ್ಲಿ ಎನಾದರು ತೊಂದರೆ ಇದ್ದರೆ ಸಂಘದಿಂದ ಅನೇಕ ಸಮಸ್ಯೆಗಳನ್ನು ನಿವಾರಣೆ ಮಾಡಲಾಗಿದೆ. ಮನೆಯ ಶುಲ್ಕ, ಪೌರಾಡಳಿತ ಕಛೇರಿಯಿಂದ ಶೇ.50 ರಿಯಾಯಿತಿ ನೀಡುವುದು. ಮಾಜಿ ಸೈನಿಕರಿಗೆ ಹಾಗೂ ಅವರ ಅವಲಂಬಿತರಿಗೆ ಯಾವುದೇ ಕಿರುಕುಳಕ್ಕೆ ಒಳಗಾದರೆ ಅವರ ಜೊತೆಗಿದ್ದು ಸಮಸ್ಯೆಗಳನ್ನು ಪರಿಹರಿಸುವುದೆ ಈ ಸಂಘದ ಮುಖ್ಯ ಉದ್ದೇಶವಾಗಿದೆ ಎಂದರು.
ಹುತಾತ್ಮ ಯೋಧರ ಸವಿನೆನಪಿಗಾಗಿ ನಮ್ಮ ಕಚೇರಿಯ ಕಂಪೌಂಡ್ ನಲ್ಲಿರುವ ಜನರಲ್ ಕರಿಯಪ್ಪ ಅವರ ಮೂರ್ತಿ ಬಳಿ ಹುತಾತ್ಮ ಸ್ಮಾರಕ ಸ್ತಂಭ ನಿರ್ಮಿಸಿ ಪ್ರತಿ ವರ್ಷ ಮಾಜಿ ಸೈನಿಕರ ದಿನಾಚರಣೆ ಸಂದರ್ಭದಲ್ಲಿ ಅವರಿಗೆ ಗೌರವ ನಮನ ಸಲ್ಲಿಸುವ ಇರಾದೆ ನಮ್ಮ ಮುಂದಿದೆ. ನಮ್ಮ ಜಿಲ್ಲೆಯ ಹುತಾತ್ಮರ ಧರ್ಮಪತ್ನಿಯರಿಗೆ ವೀರ ನಾರಿ ರೂಪದಲ್ಲಿ ಗುರುತಿಸಿ ಅವರನ್ನು ಸನ್ಮಾನಿಸಲಾಗುತ್ತಿದೆ. ಜೊತೆಗೆ ಈಗಾಗಲೇ ಹುತಾತ್ಮ ಯೋಧರ ಹಾಗೂ ಮಾಜಿ ಸೈನಿಕರ ಮಕ್ಕಳಿಗೆ ಕಲಬುರಗಿ ಪ್ರಾದೇಶಿಕ ಕಚೇರಿಯಿಂದ ಅವರಿಗೆ ಶಿಷ್ಯವೇತನ ನೀಡಲಾಗುತ್ತಿದೆ. ಈ ಸುವರ್ಣ ಮಹೋತ್ಸವ ಸಂದರ್ಭದಲ್ಲಿ 50 ವರ್ಷದ ಸಾಧನೆ ಕುರಿತು ಪುಸ್ತಕ ಹೊರ ತರಲಾಗುತ್ತಿದೆ. ಇದು ನಮ್ಮ ಜಿಲ್ಲೆಯ ಎಲ್ಲಾ ಮಾಜಿ ಸೈನಿಕರು ಹಾಗೂ ಜಿಲ್ಲೆಯ ದೇಶಭಕ್ತರಿಗೆ ಮಾದರಿ ಹಾಗೂ ಪ್ರೇರಣೆಯಾಗಲಿದೆ ಎಂದು ಅವರು ನುಡಿದರು.
ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಪಾಂಡೆಪ್ಪ ಮೇತ್ರೆ ಅವರು ಕಾರ್ಯಕ್ರಮದ ವಿವರಣೆ ನೀಡುತ್ತಾ, ರಾಜ್ಯದ ಅರಣ್ಯ ಪರಿಸರ ಹಾಗೂ ಜೀವಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪೌರಾಡಳಿತ ಸಚಿವ ರಹೀಮ್ ಖಾನ್, ಸಂಸದ ಸಾಗರ್ ಖಂಡ್ರೆ, ಮಾಜಿ ಕೇಂದ್ರ ಸಚಿವ ಭಗವಂತ್ ಖೂಬಾ, ಶಾಸಕರಾದ ಪ್ರಭು ಚೌವ್ಹಾಣ್, ಶರಣು ಸಲಗರ್, ಸಿದ್ದಲಿಂಗಪ್ಪ ಪಾಟೀಲ್, ಡಾ. ಶೈಲೇಂದ್ರ ಬೆಲ್ದಾಳೆ, ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್, ಮಾಜಿ ಶಾಸಕ ಅಶೋಕ್ ಖೇಣಿ, ಎನ್ ಎಸ್ ಎಸ್ ಕೆ ನೂತನ ಅಧ್ಯಕ್ಷ ಸೂರ್ಯಕಾಂತ್ ನಾಗಮಾರಪಳ್ಳಿ, ಮಾಜಿ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್, ಬುಡಾ ಅಧ್ಯಕ್ಷ ಬಸವರಾಜ್ ಜಾಬಶೆಟ್ಟಿ, ಮಹಾನಗರ ಪಾಲಿಕೆಯ ಅಧ್ಯಕ್ಷ ಮಹಮ್ಮದ್ ಗೌಸ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳಾದ ಶಿವಕುಮಾರ್ ಅಮಗೊಂಡ್, ಶಂಕರ್ ಬಿರಾದಾರ್, ಎಮ್.ಕೆ ಹಬಿಬುದ್ದಿನ್, ತುಕ್ಕಪ್ಪ ಗುರು, ಶಿವಕುಮಾರ್ ಸೂರ್ಯವಂಶಿ ಹಾಗೂ ಇತರರು ಇದ್ದರು.