×
Ad

ಬೀದರ್ | ಸರಕಾರದ ಆದೇಶ ಪಾಲಿಸದೆ ಅತಿಥಿ ಶಿಕ್ಷಕರನ್ನು ಕಡೆಗಣಿಸಲಾಗುತ್ತಿದೆ : ಸಂಗಮೇಶ್ ಚಿದ್ರೆ

Update: 2025-10-17 18:52 IST

ಬೀದರ್ : ಸರ್ಕಾರ ಸುತ್ತೋಲೆ ಹೊರಡಿಸಿದರು ಕೂಡ ಅದನ್ನು ಪಾಲಿಸದೆ ವಸತಿ ಸಹಿತ ಶಾಲೆಯ ಅತಿಥಿ ಶಿಕ್ಷಕರನ್ನು ಕಡೆಗಣಿಸಲಾಗುತ್ತಿದೆ ಎಂದು ಹೈದರಾಬಾದ್ ಕರ್ನಾಟಕ ಕ್ರೈಸ್ (ಕ.ವ.ಶಿ.ಸಂ.ಸಂಘ) ಅತಿಥಿ ಶಿಕ್ಷಕರ ಹಾಗೂ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಸಂಗಮೇಶ್ ಚಿದ್ರೆ ಅವರು ಆಕ್ರೋಶ ಹೊರಹಾಕಿದರು.

ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಅತಿಥಿ ಶಿಕ್ಷಕರಿಗೆ ಅಕ್ಟೋಬರ್ ತಿಂಗಳ ಗೌರವ ಧನವನ್ನು ಪಾವತಿಸಬೇಕು ಎಂದು ಶಿಕ್ಷಣ ಇಲಾಖೆಯು ಸುತ್ತೋಲೆ ಹೊರಡಿಸಿದರು ಕೂಡ ಅದನ್ನು ಕಡೆಗಣಿಸಿ ಯಾವುದೇ ಗೌರವ ಧನವನ್ನು ನೀಡುತ್ತಿಲ್ಲ ಎಂದು ಅವರು ಆರೋಪಿಸಿದರು.

ಸುಪ್ರೀಂ ಕೋರ್ಟ್ ಆದೇಶದಂತೆ ಅತಿಥಿ ಶಿಕ್ಷಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಜವಾಹರ್ ನವೋದಯ ಶಾಲೆಯ ಅತಿಥಿ ಶಿಕ್ಷಕರಿಗೆ ನೀಡುವ 34 ರಿಂದ 36 ಸಾವಿರ ರೂ. ವೇತನದಂತೆ ಕ್ರೈಸ್ ಸಂಸ್ಥೆಯ ಅತಿಥಿ ಶಿಕ್ಷಕ ಮತ್ತು ಉಪನ್ಯಾಸಕರಿಗೆ ನೀಡಬೇಕು. ಸೇವಾ ಭದ್ರತೆ, ಪಿ. ಎಫ್, ಜೀವವಿಮೆ ಹಾಗೂ ವೈದ್ಯಕೀಯ ಸೌಲಭ್ಯ ಒದಗಿಸಬೇಕು. ದಸರಾ ಹಾಗೂ ಬೇಸಿಗೆ ರಜೆಯ ಸಂಬಳ ನೀಡಬೇಕು. 6ರಿಂದ 10 ವರ್ಷ ಮೇಲ್ಪಟ್ಟು ಕಾರ್ಯನಿರ್ವಹಿಸುವ ಅತಿಥಿ ಶಿಕ್ಷಕರನ್ನು ಖಾಯಂ ಶಿಕ್ಷಕರಾಗಿ ನೇಮಕಾತಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ನಮ್ಮ ಬೇಡಿಕೆಗಳು ಈಡೇರದಿದ್ದರೆ ಬರುವ ಚಳಿಗಾಲದ ಬೆಳಗಾವಿ ಅಧಿವೇಶನದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ರಮೇಶ್ ಸೂರ್ಯವಂಶಿ, ಅಮರಪಾಲ್, ಇಮ್ಯಾನುವೆಲ್, ಸಾಯಿನಾಥ್ ವಾಘಮಾರೆ, ರವಿ ಅಲಮಾಜೆ, ರಮೇಶ್ ಐನಾಪುರ್ ಹಾಗೂ ಸಂತೋಷ ವಗ್ಗೆ ಸೇರಿದಂತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News