×
Ad

ಬೀದರ್ | ಮಾನವ ಕಳ್ಳ ಸಾಗಾಣಿಕೆಯು ಸಮಾಜಕ್ಕೆ ಮಾರಕ : ಸಿಇಓ ಡಾ.ಗಿರೀಶ್ ಬದೋಲೆ

Update: 2025-07-30 17:48 IST

ಬೀದರ್ : ಮಾನವ ಕಳ್ಳ ಸಾಗಾಣಿಕೆ ಸಮಾಜಕ್ಕೆ ಮಾರಕವಾಗಿದೆ ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಗಿರೀಶ್ ಬದೋಲೆ ಅವರು ತಿಳಿಸಿದರು.

ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆಯ ಅಂಗವಾಗಿ ಜಿಲ್ಲಾ ಮಟ್ಟದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಮಾನವ ಕಳ್ಳ ಸಾಗಾಣಿಕೆ ಒಂದು ಕಾನೂನು ಬಾಹಿರ ಮತ್ತು ಅಸಂವಿಧಾನಿಕ ಚಟುವಟಿಕೆಯಾಗಿದೆ. ಸಂವಿಧಾನದ 21ನೇ ವಿಧಿಯು ಭಾರತದ ಪ್ರತಿಯೊಬ್ಬ ಪ್ರಜೆಗಳಿಗೆ ಸ್ವಾತಂತ್ರ‍್ಯವಾಗಿ ಜೀವಿಸುವ ಹಕ್ಕು ನೀಡಿದ್ದು, 23ನೇ ವಿಧಿಯು ಮಾನವ ಕಳ್ಳ ಸಾಗಾಣಿಕೆ ಅಪರಾಧ ಎಂದು ತಿಳಿಸುತ್ತದೆ. ಭಾರತ ಸರ್ಕಾರವು ಮಾನವ ಕಳ್ಳ ಸಾಗಾಣಿಕೆ ತಡೆ ಕಾಯ್ದೆ 1956 ನ್ನು ಜಾರಿಗೆ ತಂದಿದೆ. ಆದರೂ, ಕೂಡ ಮಾನವ ಕಳ್ಳ ಸಾಗಾಣಿಕೆ ಆಗುತ್ತಿರುವುದು ಗಂಭೀರದ ವಿಷಯವಾಗಿದೆ ಎಂದರು.

ಕಾಣೆಯಾದವರ ಬಗ್ಗೆ ದೂರ ನೀಡಲು ಗ್ರಾಮ ಪಂಚಾಯತ್‌ ಮಟ್ಟದಲ್ಲಿ ಕಾವಲು ಸಮಿತಿ ಇರುತ್ತದೆ. ಅಲ್ಲಿ ಕೂಡ ದೂರ ನೀಡಬಹುದು. ಪೋಲಿಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯಾವಾಗಲೂ ಸಾರ್ವಜನಿಕರ ಸಹಾಯಕ್ಕೆ ಇರುತ್ತದೆ. ಮಾನವ ಕಳ್ಳ ಸಾಗಾಣಿಕೆಯನ್ನು ತಡೆದು ಮಾನವ ಕಳ್ಳ ಸಾಗಾಣಿಕೆ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲಾ ಇಲಾಖೆಯ ಅಧಿಕಾರಿ ಮತ್ತು ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಮಾತನಾಡಿ, ಮಾನವ ಕಳ್ಳ ಸಾಗಾಣಿಕೆಯಲ್ಲಿ ಮಹಿಳೆಯರು, ಮಕ್ಕಳು ಮತ್ತು ಇತರರು ಒಳಗೊಂಡಿರುತ್ತಾರೆ. ಮಹಿಳೆಯರನ್ನು ಬೇರೆ ಸ್ಥಳಗಳಿಗೆ ಸಾಗಾಣಿಕೆ ಮಾಡಿ ವೇಶ್ಯಾವಾಟಿಕೆಯಂತಹ ಸಮಾಜದ ಕೆಟ್ಟ ಚಟುವಟಿಕೆಗಳಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಮಕ್ಕಳನ್ನು ಭಿಕ್ಷಾಟನೆಯಲ್ಲಿ ತೊಡಗಿಸಿ ಇತರರ ದೇಹದಲ್ಲಿರುವ ಅಂಗಾಂಗಗಳು ತೆಗೆದುಕೊಂಡು ಬೇರೆಯವರಿಗೆ ಮಾರಾಟ ಮಾಡುತ್ತಾರೆ. ಕಾರ್ಖಾನೆಗಳಲ್ಲಿ ಕೆಲಸಕ್ಕೂ ಕೂಡ ಬಳಸಿಕೊಳ್ಳುತ್ತಾರೆ. ಇಂತಹ ಹೀನ ಕೃತ್ಯಗಳಿಂದ ಜನರನ್ನು ಕಾಪಾಡಬೇಕು ಎಂದು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಾಶ್ ಬನಸೋಡೆ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ನ್ಯಾಯವಾದಿ ಬಸವರಾಜ್ ಬುಳ್ಳಾ, ಬಿ.ಎಸ್.ಪಾಟೀಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಶ್ರೀಧರ್ ಎಮ್.ಎಸ್, ಜಿಲ್ಲಾ ಕಾರ್ಮಿಕ ಅಧಿಕಾರಿ ಮಹೇಶ್, ಡಾನ್ ಬಾಸ್ಕೋ ಸ್ವಯಂ ಸೇವಾ ಸಂಸ್ಥೆಯ ನಿರ್ದೇಶಕ ಸ್ಟೀವನ್ ಲಾರೆನ್ಸ್, ಹಾಗೂ ಮಕ್ಕಳ ಸಂರಕ್ಷಣಾಧಿಕಾರಿ ಗೌರಿಶಂಕರ್ ಪ್ರತಾಪುರ್ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News