×
Ad

ಬಾಬು ಜಗಜೀವನರಾಮ್ ಭವನಕ್ಕೆ ಮೀಸಲಿಟ್ಟ ಹಣ ಲೂಟಿ : ಫರ್ನಾಂಡಿಸ್ ಹಿಪ್ಪಳಗಾಂವ್ ಆರೋಪ

Update: 2025-12-09 16:49 IST

ಬೀದರ್: ಬಾಬು ಜಗಜೀವನರಾಮ ಭವನಕ್ಕೆ ಮೀಸಲಿಟ್ಟ 50 ಲಕ್ಷ ರೂ. ಲೂಟಿ ಮಾಡಿದ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರನ್ನು ಜೈಲಿಗೆ ಕಳುಹಿಸಬೇಕು. ಈ ಭವನ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಘೋಷಿಸಿದಂತೆ ಒಂದು ವಾರದೊಳಗೆ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಕಾರ್ಯಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ್ ಹೇಳಿದ್ದಾರೆ.  

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫರ್ನಾಂಡಿಸ್ ಹಿಪ್ಪಳಗಾಂವ್,  2012-13ನೇ ಸಾಲಿನಲ್ಲಿ ಬೀದರ್ ನಗರದಲ್ಲಿ ಡಾ. ಬಾಬು ಜಗಜೀವನರಾಮ್ ಭವನ ನಿರ್ಮಾಣಕ್ಕೆ ಅಂದಿನ ಸಮಾಜ ಕಲ್ಯಾಣ ಇಲಾಖೆ ಸಚಿವ ಎ. ನಾರಾಯಣಸ್ವಾಮಿ ಅವರು 1 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದರು. ಅಂದಿನ ಬೀದರ್ ಜಿಲ್ಲಾಧಿಕಾರಿಗಳು ಬೀದರ್ ನ ನೌಬಾದ್ ನ ಡಯಟ್ ಕಾಲೇಜ್ ಹಿಂದುಗಡೆ 2 ಎಕರೆ ಜಮೀನನ್ನು ಭವನ ನಿಮಾರ್ಣಕ್ಕೆ ಗುರುತಿಸಿ ಗುದ್ದಲಿ ಪೂಜೆ ಕೂಡ ನೇರವೆರಿಸಿದ್ದರು ಎಂದು ಹೇಳಿದರು. 

ಏ.5, 2025ರಂದು ಚಿಕ್ಕಪೇಟ್‌ನಲ್ಲಿ ಭವನಕ್ಕೆ ಮೀಸಲಿಟ್ಟ ಜಮೀನಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ, ಪೌರಾಡಳಿತ ಸಚಿವ ರಹೀಮ್ ಖಾನ್, ಪ್ರಸ್ತುತ ಜಿಲ್ಲಾಧಿಕಾರಿಯಾಗಿರುವ ಶಿಲ್ಪಾ ಶರ್ಮಾ ಹಾಗೂ ಸಮಾಜ ಕಲ್ಯಾಣ ಉಪನಿರ್ದೇಶಕರು ಸೇರಿ ಕಾಮಗಾರಿ ಪ್ರಾರಂಭಿಸಲು ಗುದ್ದಲಿ ಪೂಜೆ ನೇರವೆರಿಸಿದ್ದಾರೆ. ಗುದ್ದಲಿ ಪೂಜೆ ನೇರವೆರಿಸಿದ ನಂತರ ಸಚಿವ ಈಶ್ವರ್ ಖಂಡ್ರೆ ಅವರು ಭವನ ನಿರ್ಮಾಣಕ್ಕೆ 5 ಕೋಟಿ ರೂ. ಹಣದ ಅಶ್ವಾಸನೆ ಕೂಡ ನೀಡಿದ್ದಾರೆ. 2012-13ನೇ ಸಾಲಿನಲ್ಲಿ ಭವನ ನಿರ್ಮಾಣಕ್ಕೆ ಮೀಸಲಿಟ್ಟ 1 ಕೋಟಿ ರೂ. ಹಾಗೆಯೇ ಉಳಿದಿರುತ್ತದೆ. ಆ ನಂತರ ಕಾಮಗಾರಿ ಪ್ರಾರಂಭಿಸಲು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಹಿಂದೇಟು ಹಾಕುತ್ತಿದ್ದಾರೆ. ಅವರನ್ನು ವಿಚಾರಿಸಿದಾಗ 1 ಕೋಟಿ ರೂ. ನಿರ್ಮಿತಿ ಕೇಂದ್ರಕ್ಕೆ ಹಣ ಬಿಡುಗಡೆ ಮಾಡಿರುತ್ತೇವೆ ಎಂದು ಹೇಳುತ್ತಾರೆ. ಅಲ್ಲಿ ವಿಚಾರಿಸಿದಾಗ ನಮಗೆ ಭವನ ನಿರ್ಮಾಣಕ್ಕೆ ನಯಾ ಪೈಸೆ ಕೂಡ ಬಂದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಇದರ ಬಗ್ಗೆ ಸಮಾಜ ಕಲ್ಯಾಣ ಉಪನಿರ್ದೇಶಕರಿಗೆ ವಿಚಾರಿಸಿದಾಗ ನಿರ್ಮಿತಿ ಕೇಂದ್ರ ಇಲ್ಲ. ಕೆ ಆರ್ ಐಡಿಎಲ್ ಗೆ ಹಣ ಕಳಿಸಿದ್ದೇವೆ ಎಂದು ಹೇಳುತ್ತಾರೆ. ಅಲ್ಲಿನ ಅಧಿಕಾರಿಗಳಿಗೆ ವಿಚಾರಿಸಿದಾಗ ನಮಗೆ ಭವನ ನಿರ್ಮಾಣಕ್ಕೆ ನಯಾ ಪೈಸೆ ಕೂಡ ಬಂದಿಲ್ಲ ಎಂದು ಹೇಳುತ್ತಿದ್ದಾರೆ. ಮತ್ತೆ ನಾವು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರನ್ನು ವಿಚಾರಿಸಿದಾಗ 1 ಕೋಟಿ ರೂ.ನಲ್ಲಿ 50 ಲಕ್ಷ ರೂ. ಸರಕಾರ ಹಿಂಪಡೆದಿರುತ್ತದೆ ಎಂದು ತಿಳಿಸಿದ್ದಾರೆ. ಉಳಿದ 50 ಲಕ್ಷ ರೂ. ಅಧಿಕಾರಿಗಳು ಭ್ರಷ್ಟಾಚಾರ ನಡೆಸಿದ್ದಾರೆ. ಈ ಬಗ್ಗೆ ತನಿಖೆ ಕೈಗೊಂಡು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರನ್ನು ಜೈಲಿಗೆ ಕಳುಹಿಸಿ, ಆದಷ್ಟು ಬೇಗ ಭವನದ ಕಾಮಗಾರಿ ಪ್ರಾರಂಭ ಮಾಡಬೇಕು. ಒಂದು ವೇಳೆ ವಿಳಂಬ ಮಾಡಿದರೆ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಅನಿರ್ದಿಷ್ಟ ಅವಧಿಗೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುತ್ತೇವೆ ಎಂದು ಹೇಳಿದರು.  

ಈ ವೇಳೆ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ವಿಜಯಕುಮಾರ್ ಹಿಪ್ಪಳಗಾಂವ್, ಜಿಲ್ಲಾ ಉಪಾಧ್ಯಕ್ಷ ಕಮಲಾಕರ್ ಹೆಗಡೆ, ಸಾಮಾಜಿಕ ಜಾಲತಾಣ ಮುಖ್ಯಸ್ಥ ಹರೀಶ್ ಗಾಯಕವಾಡ್, ಸದಸ್ಯರಾದ ಅಬ್ರಾಹಂ ಸೂರ್ಯವಂಶಿ, ರಾಹುಲ್ ನಂದಿ ಹಾಗೂ ಮಾರ್ಕ್ ಸಾಗರ್ ಉಪಸ್ಥಿತರಿದ್ದರು.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News