ಬೀದರ್| ಗುಡಿಸಲು ಕಟ್ಟಿಕೊಂಡು ಬದುಕಲು ಅನುವು ಮಾಡಿಕೊಡುವಂತೆ ಆಗ್ರಹಿಸಿ ಅಲೆಮಾರಿ ಸಮುದಾಯದಿಂದ ಪ್ರತಿಭಟನೆ
ಬೀದರ್ : ಸುಮಾರು 25 ವರ್ಷಗಳಿಂದ ಜಾಗ, ಮನೆ ಇಲ್ಲದೆ ನಗರದ ನೌಬಾದನಲ್ಲಿರುವ ಚೌಳಿ ಕಮಾನ್ ಹತ್ತಿರದಲ್ಲಿ ಬೀದಿ ಬಳಿ ವಾಸಿಸುತ್ತಿದ್ದೇವೆ. ಹಾಗಾಗಿ ನಮಗೆ ಗುಡಿಸಲು ಕಟ್ಟಿಕೊಂಡು ಬದುಕಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿ ಅಲೆಮಾರಿ ಸಮುದಾಯದಿಂದ ಪ್ರತಿಭಟನೆ ನಡೆಯಿತು.
ಬುಧವಾರ ನಗರದ ಮಡಿವಾಳ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಗುಡಿಸಲು ಕೊಡಿ ಬದುಕಲು ಬಿಡಿ ಎಂಬ ಘೋಷಣೆಗಳು ಕೂಗುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪ್ರತಿಭಟನೆಯಲ್ಲಿ ಅಲೆಮಾರಿ ಸಮುದಾಯಗಳ ಹೋರಾಟಗಾರ ಓಂಪ್ರಕಾಶ್ ರೊಟ್ಟೆ ಅವರು ಮಾತನಾಡಿ, ಅಲೆಮಾರಿ ಸಮುದಾಯದ 84 ಕುಟುಂಬಗಳ ಜನರು ಸುಮಾರು 25 ವರ್ಷಗಳಿಂದ ಬೀದಿಯಲ್ಲಿ ಬದುಕುತಿದ್ದಾರೆ. ಅವರಿಗೆ ತಾತ್ಕಾಲಿಕ ಟಿನ್ ಶೆಡ್, ವಿದ್ಯುತ್, ಶೌಚಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಅವರ ಮಕ್ಕಳಿಗೆ ಶಿಕ್ಷಣ ಸಿಗುತ್ತಿಲ್ಲ. ಸುಮಾರು ವರ್ಷಗಳಿಂದ ನಾವು ಹೋರಾಟ ಮಾಡುತಿದ್ದರೂ ಕೂಡ ಯಾವ ಅಧಿಕಾರಿಯು ಈ ಅಲೆಮಾರಿಗಳತ್ತ ತಿರುಗಿ ನೋಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇವಾಗ ಅಲೆಮಾರಿ ಜನಾಂಗ ವಾಸಿಸುತ್ತಿರುವ ಜಾಗದ ಹತ್ತಿರ ಶ್ರೀಮಂತರು ಮನೆ ಕಟ್ಟಿಕೊಂಡಿದ್ದು, ಈ ಅಲೆಮಾರಿ ಜನಾಂಗಕ್ಕೆ ದಿನಾ ಕಿರಕುಳ ನೀಡುತ್ತಿದ್ದಾರೆ. ಅಲೆಮಾರಿ ಜನಾಂಗ ಶೌಚಾಲಯವಿಲ್ಲದೆ ಅನಿವಾರ್ಯವಾಗಿ ಬೀದಿ ಬದಿ ಶೌಚಾಲಯಕ್ಕೆ ಹೋಗಬೇಕಾಗಿದೆ. ಇದನ್ನು ಸಹಿಸದ ಅಕ್ಕ ಪಕ್ಕದ ಶ್ರೀಮಂತ ಕುಟುಂಬಸ್ಥರು ಮಹಿಳೆಯರನ್ನು ನೋಡದೆ ಕಿರಕುಳ ನೀಡುತ್ತಿದ್ದಾರೆ. ಇದರಿಂದ ಅಲೆಮಾರಿ ಜನಾಂಗದವರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
2017 ರಲ್ಲಿ ಅಲ್ಲಿನ ಶ್ರೀಮಂತರು ಮಧ್ಯರಾತ್ರಿ ಅಲೆಮಾರಿಗಳ ಗುಡಿಸಲುಗಳಿಗೆ ಜೆಸಿಬಿ ಹಚ್ಚಿ ಬೀದಿಗೆ ತಳ್ಳಿದ್ದರು. ಆ ಘಟನೆ ಇಡೀ ಮನುಕುಲವೇ ನಾಚಿಕೆ ಪಡುವಂತಿತ್ತು. ಆ ಘಟನೆ ಮತ್ತೊಮ್ಮೆ ಮರುಕಳಿಸುವ ಸಾಧ್ಯತೆ ಇದೆ. ಹಾಗಾಗಿ ತಕ್ಷಣವೇ ಈ ಅಲೆಮಾರಿ ಜನಾಂಗಕ್ಕೆ ಜಾಗ್ ಕಾರಂಜಾ (ಬೆಚಿರಾಗ್) ಗ್ರಾಮದಲ್ಲಿ ಸರಕಾರಿ ಜಮೀನು ಇದ್ದು ಅದರಲ್ಲಿ ಗುಡಿಸಲು ಹಾಕಿ ಬದುಕಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ನಮ್ಮ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಕರೆ ಮೂಲಕ ಮಾತನಾಡಿ, 10 ದಿವಸದಲ್ಲಿ ಈ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ. ಹಾಗಾಗಿ ನಾವು ಪ್ರತಿಭಟನೆ ವಾಪಸ್ಸು ಪಡೆದಿದ್ದೇವೆ. ಒಂದು ವೇಳೆ ಜಿಲ್ಲಾಧಿಕಾರಿಗಳು ತಮ್ಮ ಭರವಸೆ ಈಡೇರಿಸದಿದ್ದರೆ ಜ. 2ರಂದು ಮತ್ತೊಮ್ಮೆ ಪ್ರತಿಭಟನೆಗೆ ಇಳಿಯುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಅಲೆಮಾರಿ ಸಮುದಾಯದ ರೇಷ್ಮಾ, ರಮಾ, ಸವಿತಾ, ಶಾಮ್ ಹಾಗೂ ರಾಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.