×
Ad

ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ "ಶಾಂತಿ, ಸಮೃದ್ಧಿ ಕುರ್‌ಆನಿನ ಬೆಳಕಿನಲ್ಲಿ" ಎಂಬ ವಿಷಯದ ಕುರಿತು ಪ್ರವಚನ

Update: 2025-12-07 18:55 IST

ಬೀದರ್: ಕುರ್‌ಆನ್ ಸೃಷ್ಟಿಕರ್ತ ಹಾಗೂ ಮಾನವ ಸಂಬಂಧ ಹೇಗಿರಬೇಕು ಎಂಬುದರ ಮಾರ್ಗದರ್ಶಿಯಾಗಿದೆ ಎಂದು  ಅನುಪಮ ಮಹಿಳಾ ಮಾಸಿಕದ ಉಪ ಸಂಪಾದಕಿ ಸಬೀಹಾ ಫಾತಿಮಾ ಹೇಳಿದರು.

ನಗರದ ಪೂಜ್ಯ ಚನ್ನಬಸವ ಪಟ್ಟದೇವರು ರಂಗ ಮಂದಿರದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಸ್ಥಳೀಯ ಮಹಿಳಾ ವಿಭಾಗದ ವತಿಯಿಂದ ಏರ್ಪಡಿಸಿದ್ದ 'ಶಾಂತಿ ಮತ್ತು ಸಮೃದ್ಧಿ ಕುರ್‌ಆನಿನ ಬೆಳಕಿನಲ್ಲಿ' ಕುರಿತ ಪ್ರವಚನ ಕಾರ್ಯಕ್ರಮದಲ್ಲಿ ಕುರ್‌ಆನ್ ಅಧ್ಯಾಯ 17ರ ಸೂಕ್ತ 23 ರಿಂದ 30ರವರೆಗೆ ಪಠಿಸಿ, ಅವುಗಳ ವಿವರಣೆ ನೀಡಿದರು.

ಸೃಷ್ಟಿಕರ್ತ-ಮಾನವ ಮತ್ತು ಮಾನವ-ಮಾನವರ ಮಧ್ಯದ ಸಂಬಂಧ ಗಟ್ಟಿಯಾದರೆ ಶಾಂತಿ, ಸಮೃದ್ಧಿ ನೆಲೆಗೊಳ್ಳುತ್ತದೆ. 'ಅಸ್ಸಲಾಮ್ ಅಲೈಕುಮ್ ರಹಮತುಲ್ಲಾಹೀ ಬರಕಾತುಹು' ಎನ್ನುವುದು ಅಲ್ಲಾಹನು ನಿಮ್ಮ ಮೇಲೆ ಶಾಂತಿ, ಕರುಣೆ ಹಾಗೂ ಸಮೃದ್ಧಿ ವರ್ಷಿಸಲಿ ಎಂಬ ಪ್ರಾರ್ಥನೆಯಾಗಿದೆ. ನಾವು ಶಾಂತಿಗಾಗಿ ಪ್ರಾರ್ಥಿಸುವವರು ಎಂದು ತಿಳಿಸಿದರು.

ನಮ್ಮೆಲ್ಲರ ಪ್ರಭು ಏಕದೇವನು, ಇಡೀ ಪ್ರಪಂಚದ ನಿಯಂತ್ರಕನೂ ಆಗಿದ್ದಾನೆ. ಅವನ ಹೊರತು ಬೇರೆ ಯಾರೂ ಆರಾಧ್ಯರಿಲ್ಲ. ಅವನಿಗೆ ತೂಕಡಿಕೆಯಾಗಲಿ, ನಿದ್ರೆಯಾಗಲಿ ಬಾಧಿಸುವುದಿಲ್ಲ. ಭೂಮಿಯಲ್ಲಿ ಇರುವುದೆಲ್ಲವೂ ಅವನದೇ ಎಂದು ಅವನ ಗುಣ ವಿಶೇಷತೆಗಳನ್ನು ಅವರು ವಿವರಿಸಿದರು.

ದಿವ್ಯ ಉಪಸ್ಥಿತಿ ವಹಿಸಿದ್ದ ಬಸವ ಮಂಟಪದ ಸದ್ಗುರು ಮಾತೆ ಸತ್ಯದೇವಿ ಅವರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಶಾಂತಿಯನ್ನು ಉಳಿಸಿ, ಬೆಳೆಸಬೇಕಿದೆ. ಶಾಂತಿ ಎನ್ನುವುದು ಸಂಪತ್ತು ಹಾಗೂ ಅಪಾರ ಸಾಧನಗಳಿಂದ ದೊರೆಯುವಂಥದ್ದಲ್ಲ. ದೇವನ ಆರಾಧನೆ, ಕರುಣೆ, ದಯೆ, ನ್ಯಾಯ, ಸಮಾನತೆಯಿಂದ ಶಾಂತಿ ಲಭಿಸುತ್ತದೆ. ಮುಹಮ್ಮದ್(ಸ) ಹಾಗೂ ಬಸವಣ್ಣ ಶಾಂತಿ, ಸೌಹಾರ್ದತೆಯ ಪ್ರತೀಕ ಎಂದು ಬಣ್ಣಿಸಿದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರತಿಮಾ ಬಹೆನ್‍ಜಿ ಅವರು ಮಾತನಾಡಿ, ದೇವರು ಪ್ರೇಮ, ಶಾಂತಿ, ಶಕ್ತಿಯ ಸಾಗರ. ಆತನಿಂದಲೇ ಶಾಂತಿ ದೊರೆಯುತ್ತದೆ. ಆರಾಮ ವಲಯ ಹಾಗೂ ವಿಜ್ಞಾನ ಪ್ರಗತಿಯಿಂದ ಶಾಂತಿ ಸಿಗುವುದಿಲ್ಲ. ಮನುಷ್ಯ ಏಕಾಂತದಲ್ಲಿ ಕುಳಿತು ಆತ್ಮಾವಲೋಕನ ಮಾಡಿಕೊಳ್ಳಬೇಕು. ಶಾಂತಿ ಸ್ವರೂಪನಾಗಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದ ರಾಜ್ಯ ಕಾರ್ಯದರ್ಶಿ ತಷ್ಕೀಲಾ ಖಾನಂ ಮಾತನಾಡಿ, ದ್ವೇಷ, ಅನ್ಯಾಯ, ವೈರತ್ವ ತೊರೆದು, ಪ್ರೀತಿ, ನ್ಯಾಯ, ಸಮಾನತೆ ಪಾಲಿಸಿದರೆ ಶಾಂತಿ ಸಾಧ್ಯ. ನಮ್ಮ ನೆಚ್ಚಿನ ಭಾರತದಲ್ಲಿ ಶಾಂತಿಯಿಂದ ಅನೇಕತೆಯಲ್ಲಿ ಏಕತೆ ಸಾಧಿಸಬಹುದಾಗಿದೆ. ಅಸಮಾನತೆ, ಅನ್ಯಾಯವೇ ಅಶಾಂತಿಗೆ ಕಾರಣವಾಗಿದೆ. ಮನಸ್ಸಿನ ಶಾಂತಿ ಪ್ರಭುವಿನ ಸ್ಮರಣೆಯಲ್ಲಿದೆ. ನಾವು ಯಾವಾಗಲೂ ಸೃಷ್ಟಿಕರ್ತನನ್ನು ಸ್ಮರಿಸುತ್ತ, ಅವನನ್ನೇ ಪ್ರಶಂಸಿಸಬೇಕು. ನಮ್ಮ ತಂದೆ ತಾಯಿ ಒಂದೇ. ನಾವೆಲ್ಲ ಸಹೋದರರು ಎಂಬ ಭಾವನೆಯಿಂದ ಸಮಾನತೆ, ಶಾಂತಿ ಸ್ಥಾಪನೆಯಾಗುತ್ತದೆ ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ಜಮಾ ಅತೆ ಇಸ್ಲಾಮಿ ಹಿಂದ್ ಸ್ಥಳೀಯ ಮಹಿಳಾ ವಿಭಾಗದ ಸಂಚಾಲಕಿ ಆಸ್ಮಾ ಸುಲ್ತಾನಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯೆ ಮಂದೀಪ್ ಕೌರ್, ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ನಿರ್ದೇಶಕಿ ಮೇಹರ್ ಸುಲ್ತಾನಾ, ಹಿರಿಯ ಸ್ತ್ರೀ ರೋಗ ತಜ್ಞೆ ಡಾ. ಶೇಖ್ ಸುಮಯ್ಯಾ ಕುಲ್‍ಸುಮ್, ಡಾ. ವಿಜಯಶ್ರೀ ಎಸ್.ಶೆಟ್ಟಿ, ಡಾ. ಸುಮಯ್ಯ ಫಾತಿಮಾ, ಸಾಹಿತಿ ಡಾ. ಸುನಿತಾ ಕೂಡ್ಲಿಕರ್, ಡಾ.ಅಮಲ್ ಷರೀಫ್, ಡಾ. ದೀಪಾ ನಂದಿ, ಬಿಲ್ಕೀಸ್ ಫಾತಿಮಾ, ಬುಶ್ರಾ ಜಮಾಲ್, ಬುತುಲ್ ಸಯೀದ್ ಫಾತಿಮಾ, ವಿದ್ಯಾವತಿ ಹಿರೇಮಠ, ಡಾ. ಬುಶ್ರಾ ಐಮನ್, ರುಖಿಯ್ಯಾ ಫಾತಿಮಾ, ಡಾ. ಮಕ್ತುಂಬಿ ಎಂ. ಭಾಲ್ಕಿ, ಅಕ್ಕ ಪಡೆಯ ಸಂಗೀತಾ ಅವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News