×
Ad

ಬೀದರ್ | ಜನರಿಗೆ ಅಪಾಯಕಾರಿಯಾದ ಆರೆಸ್ಸೆಸ್ ವಿರುದ್ಧ ಹೆದರದೆ ಮಾತಾಡಬೇಕಿದೆ : ನಿವೃತ್ತ ನ್ಯಾ.ಬಿ.ಜಿ ಕೋಲ್ಸೆ ಪಾಟೀಲ್

ಬಸವಕಲ್ಯಾಣದಲ್ಲಿ ‘ಸೂಫಿ ಸಂತ ಸಮ್ಮೇಳನ’

Update: 2025-12-08 21:00 IST

ಬೀದರ್, ಡಿ.8: ಆರೆಸ್ಸೆಸ್ ಎಲ್ಲ ಜನರಿಗೆ ಅಪಾಯಕಾರಿಯಾಗಿದ್ದು, ಅದರ ವಿರುದ್ಧ ಹೆದರದೆ ಮಾತಾಡಬೇಕಿದೆ ಎಂದು ಬಾಂಬೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಜಿ ಕೋಲ್ಸೆ ಪಾಟೀಲ್‌ ಹೇಳಿದ್ದಾರೆ.

ಬಸವಕಲ್ಯಾಣದಲ್ಲಿ ರವಿವಾರ ಸಾಯಂಕಾಲ ನಡೆದ ಹಝರತ್ ಮುಹಮ್ಮದ್ ಪೈಗಂಬರ್ ಅವರ 1,500ನೇ ಜಯಂತ್ಯೋತ್ಸವದ ನಿಮಿತ್ತ ನಡೆದ ’ಸೂಫಿ ಸಂತ ಸಮ್ಮೇಳನ’ ದಲ್ಲಿ ಮಾತನಾಡಿದ ಅವರು, ನಾನು 1976 ರಿಂದ ಹೇಳುತ್ತಿದ್ದೇನೆ. ಆರೆಸ್ಸೆಸ್‌ ಅತ್ಯಂತ ಅಪಾಯಕಾರಿಯಾಗಿದೆ. ಆದರೆ, ಯಾರಿಗೂ ಅದರ ವಿರುದ್ಧ ಮಾತನಾಡುವ ಧೈರ್ಯವಿಲ್ಲ. ಅದು ಇಂದು ಸಂವಿಧಾನದಿಂದಲೇ ಅಧಿಕಾರಕ್ಕೆ ಬಂದಿದ್ದರೂ ಅದನ್ನು ಕೊನೆಗೊಳಿಸುವುದಕ್ಕಾಗಿ ಅಧಿಕಾರಕ್ಕೆ ಬಂದಿದೆ ಎಂದು ಕಿಡಿ ಕಾರಿದರು.

ಆರೆಸ್ಸೆಸ್‌ನವರು ಯಾರು ಕೂಡ ಸ್ವಾತಂತ್ರ್ಯ ಆಂದೋಲನದಲ್ಲಿ ಭಾಗವಹಿಸಲಿಲ್ಲ. ಅವರು ದೇಶಕ್ಕೆ ಯಾವುದೇ ರೀತಿಯಿಂದ ಒಳ್ಳೆಯದು ಮಾಡಲಿಲ್ಲ. ಮೌಲಾನಾ, ಮೌಲ್ವಿ ಕೂಡ ಎಲ್ಲಿವರೆಗೆ ಹೆದರುತ್ತಾರೆ ಅಲ್ಲಿವರೆಗೆ ಅವರು ನಮ್ಮ ಬೆನ್ನು ಹತ್ತುತ್ತಾರೆ. ಹಾಗಾಗಿ ಧೈರ್ಯದಿಂದ ಎದ್ದು ನಿಂತರೆ ಅವರು ತನ್ನಿಂದ ತಾನೇ ಹಿಂದೆ ಸರಿಯುತ್ತಾರೆ. ಅವರು ವಿಷಕಾರಿ ಜನರಾಗಿದ್ದು, ತುಂಬಾ ಹೆದರು ಪುಕ್ಕಲಿದ್ದಾರೆ. ಹಾಗೆಯೇ ಅವರು ತುಂಬಾ ಕಡಿಮೆ ಜನ ಇದ್ದಾರೆ. ಆದರೆ ನಮ್ಮ ಜನರು ಒಗ್ಗಟ್ಟಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈಗಲೂ ಕಾಲ ಮಿಂಚಿಲ್ಲ. ವಿಷಕಾರಿ ಜನರು ಒಂದು ಪ್ರತೀಶತ ಮಾತ್ರ ಇದ್ದಾರೆ. ಉಳಿದವರೆಲ್ಲ ಒಗ್ಗಟ್ಟಾಗಿ ಇವರ ವಿರುದ್ಧ ನಿಂತರೆ ಅವರು ಓಡಿ ಹೋಗುತ್ತಾರೆ. ಹಾಗಾಗಿ ಹಿಂದೂ, ಮುಸ್ಲಿಮ್, ಸಂತ, ದಲಿತ, ಆದಿವಾಸಿ, ಇಸಾಯಿ, ಸಿಖ್ ಪ್ರತಿಯೊಬ್ಬರು ಹೆದರದೆ ಇವರ ವಿರುದ್ಧ ಮಾತನಾಡಬೇಕಿದೆ. ಎಲ್ಲ ಹಿಂದೂಗಳು ನಮ್ಮ ವಿರೋಧಿಗಳಲ್ಲ. ನಮ್ಮ ವಿರೋಧಿಗಳು ಆರೆಸ್ಸೆಸ್ ಬ್ರಾಹ್ಮಣವಾದಿಗಳು ಮಾತ್ರ ವಿಷ ಬಿತ್ತುವ ಜನರಾಗಿದ್ದಾರೆ ಎಂದು ಗುಡುಗಿದರು.

ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಮೌಲಾನಾ ಮುಹಮ್ಮದ್ ಒಬೈದುಲ್ಲಾ ಖಾನ್ ಆಝ್ಮಿ, ಡಾ. ಹಫೀಜ್ ಹಜ್ರತ್ ಸಯ್ಯದ್ ಹುಸೇನಿ, ಹಿರೇಮಠ್ ಸಂಸ್ಥಾನದ ಗುರುಬಸವ ಪಟ್ಟದೇವರು, ಹವಾ ಮಲ್ಲಿನಾಥ್, ಪೌರಾಡಳಿತ ಸಚಿವ ರಹೀಮ್ ಖಾನ್, ತೆಲಂಗಾಣ ರಾಜ್ಯದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸಚಿವ ಅಜರುದ್ದಿನ್, ಮಾಜಿ ವಿಧಾನ ಪರಿಷತ್ ಸದಸ್ಯ ವಿಜಯ್ ಸಿಂಗ್, ನಾಸಿರ್ ಹುಸೈನ್, ಇಮ್ರಾನ್ ಮಸೂದ್, ಹೈದರ್ ಪಾಷಾ ಖಾದ್ರಿ, ಗೋಪಿನಾಥ್, ಮಾಜಿ ಸಚಿವ ರಾಜಶೇಖರ್ ಪಾಟೀಲ್, ಮಾಜಿ ವಿಧಾನ ಪರಿಷತ್ ಸದಸ್ಯ ಅರವಿಂದ್ ಅರಳಿ, ಮಾಲಾ ನಾರಾಯಣರಾವ್ ಹಾಗೂ ಎಲ್ಲ ಧರ್ಮದ ಸಂತರು, ಮೌಲ್ವಿ, ಧರ್ಮ ಗುರುಗಳು ಉಪಸ್ಥಿತರಿದ್ದರು.

ನಾವೆಲ್ಲರೂ ಜಗತ್ತಿನಲ್ಲಿ ಶಾಂತಿ ಬಯಸುತ್ತೇವೆ. ಇವತ್ತು ಹಝರತ್ ಮಹಮ್ಮದ್ ಪೈಗಂಬರ್ ಅವರ 1,500ನೇ ಜಯಂತ್ಯೋತ್ಸವದ ನಿಮಿತ್ತ ಎಲ್ಲ ಸಮುದಾಯದ ಸ್ವಾಮಿ, ಸಂತರನ್ನು ಈ ವೇದಿಕೆ ಮೇಲೆ ಕರೆದು ಶಾಂತಿ, ಸಹೋದರತೆಯ ಸಂದೇಶ ಸಾರಲಾಗುತ್ತಿದೆ. ಇದು ಬಸವಕಲ್ಯಾಣದಲ್ಲಷ್ಟೇ ಅಲ್ಲ ಇಡೀ ಜಗತ್ತಿನಲ್ಲಿ ಈ ಕೆಲಸವಾಗಬೇಕಿದೆ ಎಂದರು.

- ಈಶ್ವರ್ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ

ಸ್ವತಂತ್ರದ 75 ವರ್ಷದ ನಂತರವೂ ಮುಸಲ್ಮಾನರನ್ನು ಈ ದೇಶದಲ್ಲಿ ಶಂಕಿಸಿ ನೋಡಲಾಗುತ್ತದೆ. ಸ್ವಾತಂತ್ರ್ಯ ಚಳವಳಿಯಲ್ಲಿ ಮಹಾತ್ಮಾ ಗಾಂಧಿ, ಮೌಲಾನಾ ಅಬುಲ್ ಕಲಾಂ ಆಝಾದ್ ಭುಜಕ್ಕೆ ಭುಜ ಕೊಟ್ಟು ಹೋರಾಡಿದರು. ಮುಸಲ್ಮಾನರು ಈ ದೇಶಕ್ಕಾಗಿ ತ್ಯಾಗ ನೀಡಿದರು. ಈ ದೇಶಕ್ಕೆ ಮುಸಲ್ಮಾನರ ಅವಶ್ಯಕತೆ ಬಿದ್ದರೆ, ಅವರು ತಮ್ಮ ಪ್ರಾಣ ಒತ್ತೆ ಇಟ್ಟು ಈ ದೇಶದ ರಕ್ಷಣೆ ಮಾಡುತ್ತಾರೆ. ನಾವೆಲ್ಲರೂ ಸಹೋದರತೆ, ಶಾಂತಿಯಿಂದ ಬದುಕಬೇಕು.

- ಸಲೀಂ ಅಹಮ್ಮದ್, ವಿಧಾನ ಪರಿಷತ್‌ನ ಮುಖ್ಯ ಸಚೇತಕ

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News