ಬೀದರ್ | ಎಲ್ಲಾ ಕಚೇರಿಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಅಳವಡಿಕೆ ಕಡ್ಡಾಯ : ಡಿಸಿ ಶಿಲ್ಪಾ ಶರ್ಮಾ
ಬೀದರ್ : ಜಿಲ್ಲೆಯ ಎಲ್ಲಾ ಜಿಲ್ಲಾ, ತಾಲ್ಲೂಕು, ಹೋಬಳಿ, ಗ್ರಾಮ ಪಂಚಾಯಿತಿ ಮತ್ತು ಗ್ರಾಮ ಮಟ್ಟದ ಸರ್ಕಾರಿ ಕಚೇರಿ, ಅರೆ ಸರ್ಕಾರಿ, ಶೈಕ್ಷಣಿಕ ಸಂಸ್ಥೆ, ಖಾಸಗಿ ಸ್ವಯಂ ಸೇವಾ ಸಂಸ್ಥೆಗಳು ಸೇರಿದಂತೆ ಎಲ್ಲಾ ಕಟ್ಟಡಗಳ ಮೇಲೆ ಮಕ್ಕಳ ಸಹಾಯವಾಣಿ 1098 ನಾಮ ಫಲಕ ಅಳವಡಿಕೆ ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲಾ, ತಾಲ್ಲೂಕು, ಹೋಬಳಿ, ಗ್ರಾಮ ಪಂಚಾಯತ್ ಮತ್ತು ಗ್ರಾಮ ಮಟ್ಟದ ಸರ್ಕಾರಿ ಕಚೇರಿ, ಅರೆ ಸರ್ಕಾರಿ, ಶೈಕ್ಷಣಿಕ ಸಂಸ್ಥೆಗಳು, ಖಾಸಗಿ ಸ್ವಯಂ ಸೇವಾ ಸಂಸ್ಥೆಗಳು ಸೇರಿದಂತೆ ಎಲ್ಲಾ ಕಟ್ಟಡಗಳಲ್ಲಿ ಮಕ್ಕಳ ಸಹಾಯವಾಣಿ 1098 ನಾಮ ಫಲಕವನ್ನು ಕಡ್ಡಾಯವಾಗಿ ಅಳವಡಿಸಲು ಕ್ರಮ ವಹಿಸುವಂತೆ ಸೂಚಿಸಿ, ಸರ್ಕಾರ ಸುತ್ತೋಲೆ ಹೊರಡಿಸಿದೆ ಎಂದು ಅವರು ಹೇಳಿದ್ದಾರೆ.
ಮಕ್ಕಳ ಹಕ್ಕುಗಳ ರಕ್ಷಣೆ ಇಂದಿನ ತುರ್ತು ಅಗತ್ಯವಾಗಿದೆ. ಈಗಾಗಲೇ ಅನುಷ್ಠಾನಗೊಂಡಿರುವ ಮಿಷನ್ ವಾತ್ಸಲ್ಯ ಯೋಜನೆಯೂ ಮಕ್ಕಳ ಅಭಿವೃದ್ಧಿ ಹಾಗೂ ರಕ್ಷಣೆಯ ಆದ್ಯತೆಯನ್ನು ಸಾಧಿಸುವ ಒಂದು ಮಾರ್ಗವಾಗಿದೆ. ಸಂಕಷ್ಟದಲ್ಲಿನ ಹಾಗೂ ಸವಾಲಿನಲ್ಲಿರುವ ಮಕ್ಕಳ ಹಿತ ರಕ್ಷಣೆಗೆ ಹೆಚ್ಚು ಒತ್ತು ನೀಡುತ್ತಿದೆ. ಇಂತಹ ಮಕ್ಕಳ ಗುರುತಿಸುವಿಕೆ, ಸಂಕಷ್ಟ ಸ್ಥಿತಿಯಲ್ಲಿ ಮಾಹಿತಿ ಹಂಚಿಕೆ ಹಾಗೂ ಪುನರ್ವಸತಿ ಸೇವೆ ಒದಗಿಸುವಲ್ಲಿ ಮಕ್ಕಳ ಸಹಾಯವಾಣಿ 1098 ಮಹತ್ವದ ಪಾತ್ರ ವಹಿಸುತ್ತದೆ. ಈ ಸಂಖ್ಯೆಯನ್ನು ವ್ಯಾಪಕವಾಗಿ ಪ್ರಚಾರ ಮಾಡಿದ್ದಲ್ಲಿ ಬಾಲ್ಯ ವಿವಾಹ, ಬಾಲ ಕಾರ್ಮಿಕತೆ, ಸಂಕಷ್ಟದಲ್ಲಿನ ಮಕ್ಕಳ ರಕ್ಷಣೆ ಸೇರಿದಂತೆ ವಿವಿಧ ರೀತಿಯ ಮಕ್ಕಳ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಸಾಧ್ಯವಾಗಲಿದೆ ಎಂದಿದ್ದಾರೆ.
ಬಾಲ್ಯ ವಿವಾಹ, ಪೋಕ್ಸೋ, ಬಾಲ ಗರ್ಭಿಣಿ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿರುವುದು ಆತಂಕಕಾರಿ ವಿಚಾರವಾಗಿದೆ. ಮಕ್ಕಳ ಸಹಾಯವಾಣಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ ಇತ್ಯಾದಿ ಸುರಕ್ಷಿತ ಬೆಂಬಲ ವ್ಯವಸ್ಥೆ ಇರುವುದರ ಕುರಿತು ಮಕ್ಕಳಿಗೆ ಮಾಹಿತಿ ಇರಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು, ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳಿಗೂ ಸಹ ಈ ಕುರಿತು ಮಾಹಿತಿ ಇದ್ದಲ್ಲಿ ಮಕ್ಕಳಿಗೆ ಸಕಾಲದಲ್ಲಿ ಸ್ಪಂದನೆ ಮತ್ತು ಅಗತ್ಯ ಬೆಂಬಲ ಪಡೆಯಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.