ಬೀದರ್ | ನ.21ರಿಂದ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ 'ಮಾದರಿ ನೆರೆಹೊರೆ, ಮಾದರಿ ಸಮಾಜ' ಅಭಿಯಾನ
ಬೀದರ್ : ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆ ವತಿಯಿಂದ 'ಮಾದರಿ ನೆರೆಹೊರೆ, ಮಾದರಿ ಸಮಾಜ' ಎಂಬ ಶಿರ್ಷಿಕೆಯಡಿಯಲ್ಲಿ ನ.21 ರಿಂದ 30ರವರೆಗೆ 10 ದಿವಸಗಳ ಕಾಲ ನೆರೆಹೊರೆಯವರ ಹಕ್ಕುಗಳ ರಾಷ್ಟ್ರೀಯ ಮಟ್ಟದ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಸಲಹಾ ಮಂಡಳಿ ಸದಸ್ಯ ಮುಹಮ್ಮದ್ ಆಸಿಫೋದ್ದಿನ್ ಅವರು ತಿಳಿಸಿದರು.
ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಹಮ್ಮದ್ ಆಸಿಫೋದ್ದಿನ್, ಸಮಾಜದ ಮುಂದೆ ನೆರೆಹೊರೆಯವರ ಹಕ್ಕುಗಳು, ಪರಸ್ಪರರ ಬಗ್ಗೆ ಕಾಳಜಿ, ಸಹಕಾರ, ಶಿಸ್ತು, ಶುಚಿತ್ವ ಮತ್ತಿತರ ಸಾಮಾಜಿಕ ಹೊಣೆಗಾರಿಕೆಗಳನ್ನು ನಿರ್ವಹಿಸಲು ಪ್ರೇರೇಪಿಸುವುದು ಅಭಿಯಾನದ ಗುರಿಯಾಗಿದೆ ಎಂದು ಹೇಳಿದರು.
ಈ ಅಭಿಯಾನದ ಪ್ರಯುಕ್ತ ಪ್ರವಚನ, ಮೊಹಲ್ಲಾ ಸಭೆಗಳು, ಕರಪತ್ರ ವಿತರಣೆ, ಕೌಟುಂಬಿಕ ಭೇಟಿ, ಸಾಂಸ್ಕೃತಿಕ ಕಾರ್ಯಕ್ರಮ, ಟ್ರಾಫಿಕ್ ನಿಯಮಗಳ ಜಾಗೃತಿ ಸಮಾವೇಶ ಹಾಗೂ ವಿದ್ಯಾರ್ಥಿ, ಯುವಕರ ರ‍್ಯಾಲಿ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಜಮಾಅತೆ ಇಸ್ಲಾಮಿ ಹಿಂದ್ ಸದಸ್ಯ ಮುಹಮ್ಮದ್ ನಿಝಾಮೋದ್ದಿನ್ ಮಾತನಾಡಿ, ದಿನೇ ದಿನೇ ಮಾನವ ಸಂಬಂಧಗಳು ಶಿಥಿಲಗೊಳ್ಳುತ್ತಿವೆ. ಸಮಾಜದಲ್ಲಿ ಒಡಕು ಉಂಟು ಮಾಡುವುದನ್ನು ಬಿಟ್ಟು, ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ಜಮಾತೆ ಇಸ್ಲಾಮಿ ಮಹಿಳಾ ವಿಭಾಗದ ಜಿಲ್ಲಾ ಸಂಚಾಲಕಿ ತೌಹೀದ್ ಸಿಂಧೆ, ಮಹಿಳಾ ವಿಭಾಗದ ಸಂಚಾಲಕಿ ಅಸ್ಮಾ ಸುಲ್ತಾನಾ ಹಾಗೂ ಮಹಮ್ಮದ್ ಆರಿಫೋದ್ದಿನ್ ಉಪಸ್ಥಿತರಿದ್ದರು.