×
Ad

ಬೀದರ್ | ʼಕಲಾಜಾಥಾ'ಗೆ ಅಮೃತರಾವ್ ಚಿಮಕೋಡೆ ಅವರಿಂದ ಚಾಲನೆ

Update: 2025-11-04 18:14 IST

ಬೀದರ್ : ರಾಜ್ಯ ಸರ್ಕಾರದ ಐದು ಗ್ಯಾರೆಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಹಾಗೂ ಯುವನಿಧಿ ಯೋಜನೆ ಕುರಿತಂತೆ ಎಲ್ಇಡಿ ವಾಹನದ ಮೂಲಕ ಕಿರುಚಿತ್ರಗಳ ಪ್ರದರ್ಶನ, ಸಂಗೀತ, ಬೀದಿ ನಾಟಕದಿಂದ ಜನಸಾಮಾನ್ಯರಿಗೆ ಮಾಹಿತಿ ಹಾಗೂ ಪ್ರಚಾರ ನೀಡಲು ಹಮ್ಮಿಕೊಂಡಿರುವ 'ಕಲಾಜಾಥಾ' ಗೆ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಮೃತರಾವ್ ಚಿಮಕೋಡೆ ಅವರು ಚಾಲನೆ ನೀಡಿದರು.

ಇಂದು ನಗರದ ಹಳೆ ಬಸ್ ನಿಲ್ದಾಣ ಎದುರುಗಡೆ 'ಕಲಾಜಾಥಾ' ಗೆ ಚಾಲನೆ ನೀಡಿ ಮಾತನಾಡಿದ ಅವರು, ಕಲಾಜಾಥಾವು ಬೀದರ್‌ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಪಂಚ ಗ್ಯಾರಂಟಿಗಳ ಬಗ್ಗೆ ಜನರಿಗೆ ಮಾಹಿತಿ ನೀಡುವುದು ಹಾಗೂ ಅರಿವು ಮೂಡಿಸುವ ಉದ್ದೇಶ ಒಳಗೊಂಡಿದೆ. ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪಂಚ ಗ್ಯಾರಂಟಿಗಳು ರಾಜ್ಯದ ಜನರ ಜೀವನಕ್ಕೆ ಆಧಾರವಾಗಿವೆ ಎಂದರು.

ರಾಜ್ಯದ ಶೇ.96 ರಷ್ಟು ಜನರು ಒಂದಲ್ಲಾ ಒಂದು ರೀತಿಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಸರ್ಕಾರ ವಾರ್ಷಿಕವಾಗಿ 52,000 ಕೋಟಿ ರೂ. ಗ್ಯಾರಂಟಿಗಳಿಗಾಗಿ ಮೀಸಲಿಡಲಾಗಿದೆ. ಗ್ಯಾರಂಟಿಗಳಿಂದ ಜನರ ಜೀವನ ಮಟ್ಟ ಸುಧಾರಣೆ, ಮಹಿಳಾ ಸಬಲೀಕರಣ ಹಾಗೂ ಯುವನಿಧಿ ಯೋಜನೆಯಡಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಓದಲು ಸಹಾಯವಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಇರ್ಷಾದ್ ಪೈಲ್ವಾನ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಸುಳ್ಳೊಳ್ಳಿ , ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ವಿ.ಪ್ರಭಾಕರ್, ಸಾರಿಗೆ ಸಂಚಾರಾಧಿಕಾರಿ ಇಂದ್ರಸೇನ್ ಬಿರಾದಾರ್, ಪ್ರಭಾರಿ ವಾರ್ತಾ ಸಹಾಯಕ ವಿಜಯಕೃಷ್ಣ ಸೋಲಪುರ ಹಾಗೂ ಕಲಾ ತಂಡದ ಮುಖ್ಯಸ್ಥೆ ಚಿನ್ನಮ್ಮ ದೊಡ್ಮನಿ ಸೇರಿದಂತೆ ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರು, ಕಲಾವಿದರು ಮತ್ತು ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News