ಬೀದರ್ | ದ್ವೇಷ, ಅಹಂಕಾರ ಮುಕ್ತ ಸಮಾಜ ನಿರ್ಮಾಣ ಮಾಡೋಣ : ಶರಣಬಸಪ್ಪ ಫುಲೆ
ಬೀದರ್ : ದ್ವೇಷ ಮತ್ತು ಅಹಂಕಾರದಿಂದ ಆಧುನಿಕ ಯುಗದಲ್ಲಿ ವ್ಯಕ್ತಿಗಳು ಸುಖ, ಶಾಂತಿ, ನೆಮ್ಮದಿ ಮತ್ತು ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ನಾವೆಲ್ಲರೂ ಸೇರಿ ದ್ವೇಷ ಮತ್ತು ಅಹಂಕಾರ ಮುಕ್ತ ಸಮಾಜ ನಿರ್ಮಾಣ ಮಾಡೋಣ ಎಂದು ಶರಣಪ್ಪ ಫುಲೆ ಅವರು ಹೇಳಿದರು.
ರವಿವಾರ ನಗರದ ನೌಬಾದ್ ನ ರಾಘವೇಂದ್ರ ಕಾಲೋನಿಯಲ್ಲಿರುವ ನಿವೇದಿತಾ ಹೂಗಾರ್ ಟ್ರೈನರ್ ಅಕಾಡೆಮಿ ಸಭಾಂಗಣದಲ್ಲಿ ಮಹಾತ್ಮ ಜ್ಯೋತಿಬಾ ಫುಲೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘ ಸಂಸ್ಥೆಯಿಂದ ನಡೆದ ಧ್ಯಾನ ಹಾಗೂ ಬುದ್ಧ ಮತ್ತು ಆತನ ಧಮ್ಮ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದ್ವೇಷ ಮತ್ತು ಅಹಂಕಾರ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಶ್ರಮ ವಹಿಸಬೇಕು. ಧ್ಯಾನ ಮತ್ತು ಧಮ್ಮದ ಮಾರ್ಗದಿಂದ ಜೀವನದಲ್ಲಿ ಸುಖ, ಶಾಂತಿ ನೆಮ್ಮದಿ ಮತ್ತು ಆರೋಗ್ಯ ದೊರೆಯುತ್ತದೆ. ಹಾಗೆಯೇ ಮಾನಸಿಕ ಮತ್ತು ದೈಹಿಕ ರೋಗಗಳಿಂದ ಮುಕ್ತರಾಗಬಹುದು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ವ್ಯಕ್ತಿಗಳಾದ ಭರತ್ ಕಾಂಬಳೆ, ಧನರಾಜ್ ಮುಸ್ತಾಪುರೆ, ಶಕ್ತಿಕಾಂತ್ ಭಾವಿದೊಡ್ಡಿ, ನಿಂಗಪ್ಪ ನಿಣ್ಣೆ, ಪ್ರದೀಪ್ ನಾಟೇಕರ್, ಪ್ರಕಾಶ್ ರಾವಣ್, ಶಂಭುಲಿಂಗ್ ವಾಲ್ದೊಡ್ಡಿ, ರಾಜಕುಮಾರ್ ಜಾಂತಿಕರ್ ಹಾಗೂ ಪ್ರತಿಭಾ ಪುರಸ್ಕಾರದ ವಿದ್ಯಾರ್ಥಿಗಳಾದ ಪ್ರಸನ್ನ ಕುಮಾರಿ, ಪ್ರಕೃತಿ ಮತ್ತು ಅಶ್ವಿನಿ ಅವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಡಾ.ಕಾಶೀನಾಥ್ ಚಲ್ವಾ, ಹುಲಸೂರಿನ ತಹಶೀಲ್ದಾರ್ ಶಿವಾನಂದ್ ಮೇತ್ರೆ ಮಾಸ್ಟರ್ ಮೈಂಡ್ ಟ್ರೈನರ್ ಶ್ರೀದೇವಿ ಹೂಗಾರ್, ಶಿಕ್ಷಕಿ ಉಷಾ ಗಾಯಕ್ವಾಡ್, ಕಲ್ಲಪ್ಪ ಕೈವಾರೆ, ಪ್ರೇಮಲತಾ ದೊಡ್ಡಿ, ಜಗದೇವಿ ಫುಲೆ ಹಾಗೂ ರಾಜಕುಮಾರ್ ಕರುಣಾಸಾಗರ್ ಸೇರಿದಂತೆ ಇತರರು ಇದ್ದರು.