ಬೀದರ್ | ಮಾಧ್ಯಮ ಕ್ಷೇತ್ರದಲ್ಲಿ ಮಹೇಶ್ ಸಜ್ಜನ್‌ಗೆ ಕನ್ನಡ ಸೇವಾ ರತ್ನ ಪ್ರಶಸ್ತಿ
ಬೀದರ್ : ಕೇತಕಿ ಶೈಕ್ಷಣಿಕ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ನೀಡುವ ರಾಜ್ಯ ಮಟ್ಟದ ಕನ್ನಡ ಸೇವಾ ರತ್ನ ಪ್ರಶಸ್ತಿಯನ್ನು ಪತ್ರಕರ್ತ, ಸಂಪಾದಕ ಮಹೇಶ್ ಸಜ್ಜನ್ ಅವರಿಗೆ ನೀಡಿ ಗೌರವಿಸಲಾಗಿದೆ.
ನಗರದ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾಧ್ಯಮ ಕ್ಷೇತ್ರದಲ್ಲಿನ ಸೇವೆ ಪರಿಗಣಿಸಿ ಈ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಉಚ್ಛಾ ಗ್ರಾಮದರಾದ ಮಹೇಶ್ ಸಜ್ಜನ್ ಅವರು ಎಂಎಸ್‌ಸಿ, ಎಂಇಡಿ ಪದವೀಧರರಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಸುಮಾರು 12 ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ಉತ್ತರವಾಣಿ ಕನ್ನಡ ದಿನಪತ್ರಿಕೆಯ ಸಂಪಾದಕರಾಗಿದ್ದಾರೆ.
ನಾಡು, ನುಡಿ, ನೆಲ, ಜಲ, ಕನ್ನಡ ಭಾಷೆಯ ಜೊತೆಗೆ ಜಿಲ್ಲೆಯ ಜನಸಾಮಾನ್ಯರ ಶೈಕ್ಷಣಿಕ, ಆರ್ಥಿಕ ,ಜನಪರ, ರೈತರ, ಜ್ವಲಂತ ಸಮಸ್ಯೆಗಳನ್ನು ತಮ್ಮ ನೇರ ಹಾಗೂ ನಿಷ್ಠುರ ವರದಿಗಾರಿಕೆಯ ಮೂಲಕ ಜನಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಹಣ್ಮು ಪಾಜಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಇನ್ಸೈಟ್ ಐಎಎಸ್ ಅಕಾಡೆಮಿ ಮುಖ್ಯಸ್ಥ ಜಿ.ಬಿ.ವಿನಯಕುಮಾರ್, ಲಿಂಗಾಯತ ಮಹಾಮಠದ ಪೀಠಾಧ್ಯಕ್ಷ ಪ್ರಭುದೇವರು, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಅಮೃತರಾವ್ ಚಿಮಕೋಡೆ, ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜುಕುಮಾರ ಅತಿವಾಳೆ ಸೇರಿ ಇನ್ನಿತರ ಗಣ್ಯರು ಸೇರಿ ಪ್ರಶಸ್ತಿ ಪ್ರಧಾನ ಮಾಡಿದರು.