Basavakalyan | ಶಿಕ್ಷಣವು ಪ್ರಾದೇಶಿಕ ಅಸಮಾನತೆಯನ್ನು ನೀಗಿಸುತ್ತದೆ: ಪ್ರೊ.ಮೀನಾಕ್ಷಿ ಬಿರಾದಾರ್
‘ಚಿಗುರು ಸಂಭ್ರಮ’ ಕಾರ್ಯಕ್ರಮ
ಬಸವಕಲ್ಯಾಣ: ಶಿಕ್ಷಣದ ಮೂಲ ಉದ್ದೇಶವೇ ಎಲ್ಲ ಬಗೆಯಲ್ಲೂ ಸಮಾನತೆ ತರುವುದಾಗಿದೆ. ಪದವಿಗಳು ಕೇವಲ ಸರ್ಟಿಫಿಕೇಟ್‌ಗಳಾಗದೆ, ಸ್ಪರ್ಧಾತ್ಮಕ ಯುಗದಲ್ಲಿ ಬದುಕು ಕಟ್ಟಿಕೊಳ್ಳಲು ಆಧಾರವಾಗಬೇಕು. ಈ ನಿಟ್ಟಿನಲ್ಲಿ ಓದು ಮತ್ತು ಅಧ್ಯಯನ ನಡೆಯಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಮೀನಾಕ್ಷಿ ಬಿರಾದಾರ್ ಹೇಳಿದರು.
ನಗರದ ಬಸವೇಶ್ವರ ಪದವಿ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಚಿಗುರು ಸಂಭ್ರಮ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದ ಆರ್ಥಿಕ, ಔದ್ಯೋಗಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಪ್ರಗತಿಗೆ ಶೈಕ್ಷಣಿಕ ಗುಣಮಟ್ಟ ಹೆಚ್ಚಾಗಬೇಕು. ಶಿಕ್ಷಣವು ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಬಸವಾದಿ ಶರಣರು ಬೌದ್ಧಿಕ ಹಾಗೂ ವೈಚಾರಿಕ ಚಿಂತನೆಗಳ ಉತ್ಕೃಷ್ಟತೆಯಿಂದಾಗಿ ಅನುಭವ ಮಂಟಪದಲ್ಲಿ ಸೇರಿದ್ದರು. ಅವರು ಇಡೀ ಸಮುದಾಯವನ್ನು ಅರಿವಿನ ಮಂಟಪವಾಗಿ ರೂಪಿಸಿದ್ದರು ಎಂದು ಹೇಳಿದರು.
ರಂಗಕರ್ಮಿ ಉಮೇಶ್ ಪಾಟೀಲ್ ಮಾತನಾಡಿ, ಸಮಕಾಲೀನ ಬಿಕ್ಕಟ್ಟು ಮತ್ತು ಸಂದಿಗ್ಧತೆಗಳಿಗೆ ರಂಗಭೂಮಿ ಹಾಗೂ ನಾಟಕಗಳು ಕನ್ನಡಿಯಾಗಿವೆ. ಸಮಾಜದಲ್ಲಿ ಜಾಗೃತಿ ಮೂಡಿಸಲು ನಾಟಕಗಳು ಅಗತ್ಯ ಎಂದು ಅಭಿಪ್ರಾಯಪಟ್ಟರು.
ಪ್ರಾಚಾರ್ಯ ಡಾ. ಭೀಮಾಶಂಕರ್ ಬಿರಾದಾರ್ ಮಾತನಾಡಿ, ಸಾಮಾಜಿಕ ಪ್ರಜ್ಞೆ ಮೂಡಿಸುವ, ಸಾಂಸ್ಕೃತಿಕ ಯಜಮಾನಿಕೆಯನ್ನು ಪ್ರತಿರೋಧಿಸುವ, ಸೂಕ್ಷ್ಮತೆ ಬೆಳೆಸುವ ಹಾಗೂ ಲೋಕವನ್ನು ಅರಿಯುವ ದಾರಿಯಾಗಿ ಶಿಕ್ಷಣ ಮತ್ತು ರಂಗಭೂಮಿ ಕಾರ್ಯನಿರ್ವಹಿಸುತ್ತವೆ. ನೆಲ, ನೀರು, ಕಾಡು ಸೇರಿದಂತೆ ಒಟ್ಟಾರೆ ಜೀವನ ವಿಧಾನ ಹಾಗೂ ಪರಿಸರದ ಕುರಿತು ಪ್ರಜ್ಞೆ ಬೆಳೆಸಿಕೊಳ್ಳುವುದು ಅಗತ್ಯವಿದೆ ಎಂದರು.
ಬಿಡಿಪಿಸಿ ಅಧ್ಯಕ್ಷ ಅನಿಲಕುಮಾರ್ ರಗಟೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕಲೆ, ಮಾನವೀಯತೆ ಹಾಗೂ ಕೌಶಲ್ಯಾಧಾರಿತ ಶಿಕ್ಷಣ ಈ ಕಾಲದಲ್ಲಿ ಅಗತ್ಯವಾಗಿದೆ. ಸರ್ವತೋಮುಖ ಬೆಳವಣಿಗೆಗೆ ಅಂತರ್‌ಶಿಸ್ತೀಯ ಜ್ಞಾನ ಮುಖ್ಯವಾಗಿದೆ ಎಂದು ನುಡಿದರು.
ಈ ವೇಳೆ ಬಿಡಿಪಿಸಿ ನಿರ್ದೇಶಕ ಬಸವರಾಜ ತೊಂಡಾರೆ ಮಾತನಾಡಿದರು. ಉಮೇಶ್ ಪಾಟೀಲ್ ಅವರ ‘ಟ್ಯಾಬ್ಲೆಟ್’ ನಾಟಕ ಹಾಗೂ ವೈಶಾಲಿ ಅವರ ‘ಚಂದ್ರಮತಿಯ ಪ್ರಲಾಪ’ ನಾಟಕಗಳ ಏಕಪಾತ್ರಾಭಿನಯ ಗಮನ ಸೆಳೆದವು.
ಈ ಸಂದರ್ಭದಲ್ಲಿ ಬಿಡಿವಿಸಿ ಅಧ್ಯಕ್ಷ ಶಶಿಕಾಂತ್ ದುರ್ಗೆ, ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಕುರಕೋಟೆ, ಸಹಕಾರ್ಯದರ್ಶಿ ಬಸವರಾಜ್ ಬಾಲಕಿಲೆ, ಸುನಿಲ್ ರಾಯವಾಡೆ, ನಿರ್ದೇಶಕ ವೀರಣ್ಣ ಹಲಶೆಟ್ಟೆ, ಬದ್ರಿನಾಥ್ ಪಾಟೀಲ್, ಮಲ್ಲಿಕಾರ್ಜುನ್ ಚಿರಡೆ, ಪುಷ್ಪಾ ಮಾಮಾ, ಬಿಡಿವಿಸಿ ಕಾರ್ಯದರ್ಶಿ ನಾಗಯ್ಯ ಸ್ವಾಮಿ, ಕೋಶಾಧ್ಯಕ್ಷ ಶಿವರಾಜ್ ಶಾಶೆಟ್ಟೆ, ಸೋಮಶೇಖರಯ್ಯ ವಸ್ತ್ರದ, ಮಾಯಾ ಮುರಾಳೆ, ಡಾ. ರುದ್ರಮಣಿ ಮಠಪತಿ ಹಾಗೂ ಡಾ. ಶಾಂತಲಾ ಪಾಟೀಲ್ ಇದ್ದರು. ಡಾ. ಬಸವರಾಜ್ ಖಂಡಾಳೆ ನಿರೂಪಿಸಿದರು. ಸಂಗೀತಾ ಮಹಾಗಾವೆ ಸ್ವಾಗತಿಸಿದರು. ಜಗದೇವಿ ಜವಳಗೆ ವಂದಿಸಿದರು.