×
Ad

Bidar | ಮೇ 18ರ ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ನಮ್ಮ ವಿರೋಧ : ಬಸವರಾಜ್ ಬುಳ್ಳಾ

Update: 2026-05-14 19:26 IST

ಬೀದರ್ : ಪದೇ ಪದೇ ಬಸವಣ್ಣನವರಿಗೆ ಅವಮಾನ ಮಾಡುವ ಕೆಲಸ ನಡೆಯುತ್ತಿದೆ. ಮೇ 18ರಂದು ಶಹಾಪುರದಲ್ಲಿ ಆಯೋಜಿಸಲಾಗಿರುವ “ಬಸವಾದಿ ಶರಣರ ಹಿಂದೂ ಸಮಾವೇಶ”ಕ್ಕೆ ನಾವು ಸಂಪೂರ್ಣ ವಿರೋಧ ವ್ಯಕ್ತಪಡಿಸುತ್ತೇವೆ ಎಂದು ಲಿಂಗಾಯತ ಸಮಾಜದ ಮುಖಂಡ ಬಸವರಾಜ್ ಬುಳ್ಳಾ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಿಟಿಷರ ಕಾಲದಲ್ಲಿಯೇ ಲಿಂಗಾಯತ ಧರ್ಮವನ್ನು ವರ್ಣಾಶ್ರಮದಿಂದ ಪ್ರತ್ಯೇಕ ಧರ್ಮವೆಂದು ಗುರುತಿಸಲಾಗಿತ್ತು. ಈಗಲೂ ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಎಂಬ ಆದೇಶವಿದ್ದರೂ, ಕೇಂದ್ರ ಸರ್ಕಾರದ ಘೋಷಣೆಯ ಮೇರೆಗೆ ಜಾರಿಯಾಗಬೇಕಿತ್ತು. ಆದರೆ ಅದು ವಾಪಸ್ ಬಂದಿದೆ ಎಂದು ಹೇಳಿದರು.

ಪಟ್ಟಭದ್ರ ಹಿತಾಸಕ್ತಿಗಳು ಲಿಂಗಾಯತ ಧರ್ಮದ ಅಸ್ತಿತ್ವವನ್ನು ಕುಗ್ಗಿಸಲು ಯತ್ನಿಸುತ್ತಿವೆ. ಇದೇ ಶಕ್ತಿಗಳು ಗೌರಿ ಲಂಕೇಶ್ ಹಾಗೂ ಎಂ.ಎಂ. ಕಲಬುರ್ಗಿ ಅವರ ಹತ್ಯೆಗೂ ಕಾರಣವಾಗಿವೆ ಎಂದು ಆರೋಪಿಸಿದ ಅವರು, ಬಸವಣ್ಣನವರ ಮಾನವೀಯ ತತ್ವಗಳನ್ನು ಹಾಳು ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಕಿಡಿಕಾರಿದರು.

ಕನ್ನೇರಿ ಸ್ವಾಮಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, “ಕರ್ನಾಟಕದಲ್ಲಿ ಕನ್ನೇರಿ ಸ್ವಾಮಿಯನ್ನು ಬ್ಯಾನ್ ಮಾಡಬೇಕು” ಎಂದು ಆಗ್ರಹಿಸಿದರು.

ಶಹಾಪುರ ಹಾಗೂ ಸುತ್ತಮುತ್ತಲಿನ ಜನರಿಗೆ ನಿಜವಾದ ಬಸವ ತತ್ವಗಳನ್ನು ಪರಿಚಯಿಸುವ ಉದ್ದೇಶದಿಂದ ಮೇ 15ರಂದು ಶಹಾಪುರದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಬಸವ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.

ದಲಿತ ಮುಖಂಡ ಅನಿಲಕುಮಾರ್ ಬೆಲ್ದಾರ್ ಮಾತನಾಡಿ, “ಬಸವಣ್ಣನವರ ಹೆಸರಿಗೆ ‘ಹಿಂದುತ್ವ’ ಪದ ಜೋಡಿಸುವುದು ಹಾಸ್ಯಾಸ್ಪದವಾಗಿದೆ. ಕನ್ನೇರಿ ಸ್ವಾಮಿ ವಿರುದ್ಧ ಸುವೋ ಮೋಟೋ ಪ್ರಕರಣ ದಾಖಲಿಸಬೇಕು” ಎಂದು ಒತ್ತಾಯಿಸಿದರು.

ಓಂಪ್ರಕಾಶ್ ರೊಟ್ಟಿ ಮಾತನಾಡಿ, “ಶರಣರ ರುಂಡವನ್ನು ಚಂಡಾಡಿದವರೇ ಇಂದು ಲಿಂಗಾಯತ ಧರ್ಮಕ್ಕೆ ಕಂಟಕವಾಗಿದ್ದಾರೆ. ವೀರಶೈವ ಮತ್ತು ಲಿಂಗಾಯತ ಒಂದೇ ಎಂದು ಹೇಳುವವರು ಬಸವ ತತ್ವಗಳನ್ನು ಕೊಲ್ಲಲು ಹೊರಟಿದ್ದಾರೆ” ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಆನಂದ್ ದೇವಪ್ಪ, ಮಾರುತಿ ಬೌದ್ದೆ, ಬಾಬುರಾವ್ ಪಾಸ್ವಾನ್, ಮಹೇಶ್ ಗೋರನಾಳಕರ್ ಹಾಗೂ ವಿನಯ್ ಮಾಳಗೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News