×
Ad

ಹುಲಸೂರ್ | ಕೊಂಗಳಿ ಗ್ರಾಮದಲ್ಲಿ ಅಂಬೇಡ್ಕರ್ ಬ್ಯಾನರ್ ಹರಿದ ಕಿಡಿಗೇಡಿಗಳು : ಪ್ರಕರಣ ದಾಖಲು

Update: 2026-05-14 18:54 IST

ಹುಲಸೂರ್ : ಕೊಂಗಳಿ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವಿದ್ದ ಬ್ಯಾನರ್ ಹರಿದು ಅವಮಾನಗೊಳಿಸಿರುವ ಘಟನೆ ಮತ್ತೆ ಬುಧವಾರ ರಾತ್ರಿ ಮರುಕಳಿಸಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಸಂಬಂಧ ಮತ್ತೊಮ್ಮೆ ಪ್ರಕರಣ ದಾಖಲಾಗಿದೆ.

ಕೆಲ ದಿನಗಳ ಹಿಂದೆಯೂ ಇದೇ ಗ್ರಾಮದಲ್ಲಿನ ಶಿವಾಜಿ ಮಹಾರಾಜ ಚೌಕ್‌ನಲ್ಲಿ ಅಳವಡಿಸಿದ್ದ ಅಂಬೇಡ್ಕರ್ ಭಾವಚಿತ್ರದ ಬ್ಯಾನರ್‌ನ್ನು ಕಿಡಿಗೇಡಿಗಳು ಹರಿದು ಹಾಕಿದ ಘಟನೆ ನಡೆದಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿ ಗೌತಮ್ ಸೂರ್ಯವಂಶಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಘಟನೆಯ ಬಳಿಕ ಸಿಪಿಐ ಹನುಮರೆಡ್ಡಿ ಹಾಗೂ ಪಿಎಸ್ಐ ಸುದರ್ಶನ್ ರೆಡ್ಡಿ ನೇತೃತ್ವದಲ್ಲಿ ಶಿವಾಜಿ ಮಹಾರಾಜ ಚೌಕ್‌ನಲ್ಲಿ ಶಾಂತಿ ಸಭೆ ನಡೆಸಿ ಗ್ರಾಮಸ್ಥರಿಗೆ ಶಾಂತಿ–ಸೌಹಾರ್ದ ಕಾಪಾಡುವಂತೆ ಮನವಿ ಮಾಡಲಾಗಿತ್ತು. ಅಲ್ಲದೆ ಶಿವಾಜಿ ಚೌಕ್ ಹಾಗೂ ಅಂಬೇಡ್ಕರ್ ಚೌಕ್ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾಗಳನ್ನೂ ಅಳವಡಿಸಲಾಗಿತ್ತು.

ಆದರೆ ಇದೀಗ ಮತ್ತೆ ಅದೇ ಗ್ರಾಮದಲ್ಲಿ ಡಾ. ಅಂಬೇಡ್ಕರ್ ಭಾವಚಿತ್ರವಿದ್ದ ಬ್ಯಾನರ್ ಹರಿದು ಹಾಕಿರುವ ಘಟನೆ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಗ್ರಾಮಸ್ಥ ವಿಠ್ಠಲ್ ಸೂರ್ಯವಂಶಿ ನೀಡಿದ ದೂರಿನ ಪ್ರಕಾರ, ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಪ್ರಯುಕ್ತ ಗ್ರಾಮದ ಯುವಕರು ಸೇರಿ ಅಂಬೇಡ್ಕರ್ ವೃತ್ತದಲ್ಲಿ ಬ್ಯಾನರ್ ಅಳವಡಿಸಿದ್ದರು. ಮೇ 13ರಂದು ಮಧ್ಯಾಹ್ನ ಗ್ರಾಮದ ಸಾಗರ್ ಭೀಮ್ ಬ್ಯಾನರ್ ಹರಿದಿರುವ ವಿಷಯ ತಿಳಿಸಿದ್ದು, ಬಳಿಕ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಅಪರಿಚಿತರು ಬ್ಯಾನರ್ ಹರಿದು ಅವಮಾನಗೊಳಿಸಿರುವುದು ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸತತವಾಗಿ ಎರಡು ಬಾರಿ ಅಂಬೇಡ್ಕರ್ ಭಾವಚಿತ್ರವಿದ್ದ ಬ್ಯಾನರ್‌ಗಳನ್ನು ಹಾನಿಗೊಳಿಸಿರುವ ಘಟನೆ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಮಾಡಿದೆ. ಆರೋಪಿಗಳನ್ನು ಶೀಘ್ರ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಕುರಿತು ಮೆಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News