ಹುಮನಾಬಾದ್ | ನಾಯಿ ಕಡಿತದಿಂದ ಮಗು ಮೃತ್ಯು ಪ್ರಕರಣ : ಕುಟುಂಬಕ್ಕೆ ಶಾಸಕ ಸಿದ್ದು ಪಾಟೀಲ್ ಸಾಂತ್ವನ
ಹುಮನಾಬಾದ್ : ನಾಯಿ ಕಡಿತದಿಂದ ಮೃತಪಟ್ಟ ನಾಲ್ಕು ತಿಂಗಳ ಮಗುವಿನ ಮನೆಗೆ ಶಾಸಕ ಸಿದ್ದು ಪಾಟೀಲ್ ಗುರುವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ತಾಲೂಕಿನ ದುಬಲಗುಂಡಿ ಗ್ರಾಮದ ಬಡ ಕುಟುಂಬದ ಸುಧಾರಾಣಿ ಹಾಗೂ ಸಿದ್ದು ದಂಪತಿಗಳ ನಾಲ್ಕು ತಿಂಗಳ ಮಗು ನಾಯಿ ಕಡಿತದಿಂದ ಮೃತಪಟ್ಟ ದುರ್ಘಟನೆ ನಡೆದಿತ್ತು. ಬುಧವಾರ ಕುಟುಂಬಸ್ಥರು “ಯಾವುದೇ ಜನಪ್ರತಿನಿಧಿಗಳು ಸಾಂತ್ವನ ಹೇಳಲು ಬಂದಿಲ್ಲ” ಎಂದು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದರು. ಈ ಕುರಿತು ಸುದ್ದಿ ಪ್ರಕಟವಾದ ಬಳಿಕ ಶಾಸಕ ಸಿದ್ದು ಪಾಟೀಲ್ ಕುಟುಂಬಕ್ಕೆ ಭೇಟಿ ನೀಡಿದರು.
ಈ ವೇಳೆ ಮಾತನಾಡಿದ ಶಾಸಕ ಸಿದ್ದು ಪಾಟೀಲ್, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಕುಟುಂಬಕ್ಕೆ ಸರ್ಕಾರದಿಂದ ನಿವೇಶನ ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಅನಿಲ್ ಪಸಾರ್ಗಿ, ವಿರೇಶ್ ಸಜ್ಜನ್, ಪರಮೇಶ್ವರ್ ಕಾಳಮಂದರಗಿ, ನಾಗಭೂಷಣ ಸಂಗಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.