×
Ad

ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳು ಜಾಗೃತರಾಗಿ ಕಾರ್ಯನಿರ್ವಹಿಸಿ : ಸಚಿವ ಈಶ್ವರ್ ಖಂಡ್ರೆ

"ನೀರಿನ ಸಮಸ್ಯೆ ಕಂಡು ಬಂದರೆ 24 ಗಂಟೆಗಳಲ್ಲಿ ಬಗೆಹರಿಸಿ"

Update: 2026-05-14 19:23 IST

ಬೀದರ್ : ಜಿಲ್ಲೆಯ 38 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 68 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, 19 ಕಡೆಗಳಲ್ಲಿ ಟ್ಯಾಂಕರ್ ಮೂಲಕ ಹಾಗೂ 59 ಕಡೆಗಳಲ್ಲಿ ಬಾಡಿಗೆ ಬೋರ್‌ವೆಲ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ. ಖಂಡ್ರೆ ತಿಳಿಸಿದ್ದಾರೆ.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ನಡೆದ ಕುಡಿಯುವ ನೀರಿನ ಪರಿಶೀಲನಾ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಗಾರು ಆರಂಭವಾಗುವ ಜೂನ್ 15ರವರೆಗೆ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಮಟ್ಟದ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಬೇಸಿಗೆಯಲ್ಲಿ ನೀರಿನ ಸಮಸ್ಯೆ ತಡೆಯಲು ಜಿಲ್ಲೆಗೆ 4 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಔರಾದ್ ತಾಲೂಕಿನ 22 ಗ್ರಾಮಗಳು ಹಾಗೂ ಭಾಲ್ಕಿ ತಾಲೂಕಿನ 18 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ ಎಂದು ತಿಳಿಸಿದರು.

ಕಾರಂಜಾ ಜಲಾಶಯದಲ್ಲಿ ಸದ್ಯ 5 ಟಿಎಂಸಿ ನೀರು ಸಂಗ್ರಹವಿರುವುದರಿಂದ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗದಂತೆ ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಮುಂದಿನ 20 ದಿನಗಳಲ್ಲಿ ಅಥವಾ ಜೂನ್ 7ರೊಳಗೆ ಮುಂಗಾರು ಮಳೆ ಆರಂಭವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಅಧಿಕಾರಿಗಳು ಜೂನ್ 15ರವರೆಗೆ ಜಾಗೃತರಾಗಿರಬೇಕು ಎಂದು ತಿಳಿಸಿದರು.

135 ಕೋಟಿ ರೂ. ಬೆಳೆ ಹಾನಿ ಪರಿಹಾರ :

ಕಳೆದ ಹಂಗಾಮಿನಲ್ಲಿ ಅತಿವೃಷ್ಟಿ ಹಾಗೂ ಆಲಿಕಲ್ಲು ಮಳೆಯಿಂದ ರೈತರ ಬೆಳೆ ಹಾನಿಯಾಗಿದ್ದು, ಈಗಾಗಲೇ 100 ಕೋಟಿ ರೂ. ಪರಿಹಾರವನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ. ಹೆಚ್ಚುವರಿ ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಇನ್ನೂ 142 ಕೋಟಿ ರೂ. ಅನುದಾನ ಬಿಡುಗಡೆಯಾಗಬೇಕಿದೆ. ಮುಂದಿನ 15ರಿಂದ 20 ದಿನಗಳಲ್ಲಿ ರೈತರ ಖಾತೆಗೆ ಹಣ ಜಮೆಯಾಗಲಿದೆ ಎಂದು ಹೇಳಿದರು.

ಈ ವರ್ಷ 250 ಕೋಟಿ ರೂ. ಬೆಳೆ ವಿಮೆ :

ಫಸಲ್ ಬಿಮಾ ಯೋಜನೆಯಡಿ ಈ ವರ್ಷ 250 ಕೋಟಿ ರೂ. ಬೆಳೆ ವಿಮೆ ಹಣ ಬಂದಿದೆ. ಅಧಿಕಾರಿಗಳ ಸಹಕಾರದಿಂದ ರೈತರಿಗೆ ಒಟ್ಟು 520 ಕೋಟಿ ರೂ. ಪರಿಹಾರ ಲಭಿಸಿದೆ ಎಂದು ತಿಳಿಸಿ, ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದರು.

ಶಾಶ್ವತ ಕುಡಿಯುವ ನೀರಿಗೆ 7 ಸಾವಿರ ಕೋಟಿ ರೂ. ಯೋಜನೆ :

ಬೀದರ್ ಹಾಗೂ ಕಲಬುರಗಿ ಜಿಲ್ಲೆಯ ಕೆಲವು ಹಳ್ಳಿಗಳಿಗೆ ನಾರಾಯಣಪುರ ಜಲಾಶಯದಿಂದ ಶಾಶ್ವತ ಕುಡಿಯುವ ನೀರು ಒದಗಿಸಲು 7 ಸಾವಿರ ಕೋಟಿ ರೂ. ವೆಚ್ಚದ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಈ ಯೋಜನೆಯಿಂದ ಮುಂದಿನ 25 ವರ್ಷಗಳವರೆಗೆ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದು ಸಚಿವರು ಹೇಳಿದರು.

ಈ ಯೋಜನೆಯಿಂದ ಬೀದರ್ ಜಿಲ್ಲೆಯ 120 ಹಳ್ಳಿಗಳು ಹಾಗೂ ಕಲಬುರಗಿ ಜಿಲ್ಲೆಯ 250 ಹಳ್ಳಿಗಳಿಗೆ ಪ್ರಯೋಜನವಾಗಲಿದೆ ಎಂದು ತಿಳಿಸಿದರು.

ಭಾಲ್ಕಿ ತಾಲೂಕಿನ 120 ಹಳ್ಳಿಗಳಿಗೆ ಮಲ್ಟಿ ವಿಲೇಜ್ ನೀರು ಯೋಜನೆಯ ಕಾಮಗಾರಿ ನಡೆಯುತ್ತಿದ್ದು, ಹಲವು ಗ್ರಾಮಗಳಿಗೆ ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು.

ಕಬ್ಬಿನ ಬಾಕಿ ಬಿಲ್ ಪಾವತಿಸಿ :

ರಾಜ್ಯ ಸರ್ಕಾರ ಘೋಷಿಸಿದಂತೆ ರೈತರ ಪ್ರತಿ ಟನ್ ಕಬ್ಬಿಗೆ 50 ರೂ. ಪ್ರೋತ್ಸಾಹಧನವನ್ನು ಖಾತೆಗೆ ಜಮೆ ಮಾಡಲಾಗಿದೆ. ಸಕ್ಕರೆ ಕಾರ್ಖಾನೆಗಳು ರೈತರ ಕಬ್ಬಿನ ಬಾಕಿ ಬಿಲ್ ತಕ್ಷಣ ಪಾವತಿಸಬೇಕು. ಬಾಕಿ ಉಳಿಸಿಕೊಂಡ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

15-20 ದಿನಗಳಲ್ಲಿ ವಿಮಾನಯಾನ ಸೇವೆ :

ಬೀದರ್ ವಿಮಾನಯಾನ ಸೇವೆಗೆ ಸರ್ಕಾರ ಈಗಾಗಲೇ ಅನುಮೋದನೆ ನೀಡಿದೆ. ಮುಖ್ಯಮಂತ್ರಿಗಳೊಂದಿಗೆ ಮತ್ತೊಮ್ಮೆ ಚರ್ಚಿಸಿ ಬುಕಿಂಗ್ ದಿನಾಂಕ ಘೋಷಿಸಲಾಗುವುದು. ಮುಂದಿನ 15ರಿಂದ 20 ದಿನಗಳಲ್ಲಿ ವಿಮಾನಯಾನ ಸೇವೆ ಆರಂಭವಾಗಲಿದೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಹಾಗೂ ಬೀದರ ಮಹಾನಗರ ಪಾಲಿಕೆ ಆಯುಕ್ತರಾದ ಮುಕುಲ್ ಜೈನ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News